Taladummanahalli, Sidlaghatta : ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅಟ್ರಾಸಿಟಿ ಪ್ರಕರಣಗಳು ದಾಖಲಾದಾಗ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತಿಲ್ಲ. ಇದರಿಂದ ಅಟ್ರಾಸಿಟಿ ಕಾಯಿದೆಯ ದುರುಪಯೋಗ ಆಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ದೂರಿದರು.
ತಾಲ್ಲೂಕಿನ ತಲದುಮ್ಮನಹಳ್ಳಿಯ ದಸಂಸ ಮುಖಂಡ ಸಿ.ವಿ.ಲಕ್ಷ್ಮಣರಾಜು ಅವರ ಮನೆಗೆ ಖಾಸಗಿ ಭೇಟಿ ನೀಡಿದ್ದ ಅವರು, ಅನ್ಯಾಯಕ್ಕೆ ಒಳಗಾದ, ದೌರ್ಜನ್ಯಕ್ಕೆ ತುತ್ತಾದ ದಲಿತರು ಅಟ್ರಾಸಿಟಿ ಕೇಸನ್ನು ದಾಖಲಿಸಿದಾಗ ಅದನ್ನು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುವುದು ಪೊಲೀಸರ ಕರ್ತವ್ಯ.
ಆದರೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇತ್ತೀಚಿನ ಕೆಲ ಪ್ರಕರಣಗಳನ್ನು ಗಮನಿಸಿದರೆ ತನಿಖೆ ದಿಕ್ಕು ತಪ್ಪಿದೆ. ತನಿಖೆಯಲ್ಲಿ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ. ಹಾಗಾಗಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಾಗಾಗಿ ಈ ಎರಡೂ ಜಿಲ್ಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಟ್ರಾಸಿಟಿ ಪ್ರಕರಣಗಳಲ್ಲಿ ಪೊಲೀಸರ ನಿರ್ಲಕ್ಷ್ಯವಹಿಸಿದ ಪ್ರಕರಣಗಳನ್ನು ಪಟ್ಟಿ ಮಾಡಿ ನನಗೆ ಕೊಡಿ, ಗೃಹ ಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಲು ಮನವಿ ಮಾಡುತ್ತೇನೆ ಎಂದು ಸ್ಥಳೀಯ ದಸಂಸ ಮುಖಂಡರಿಗೆ ಸೂಚಿಸಿದರು.
ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ನಾನು ಈ ಬಗ್ಗೆ ಪತ್ರ ಬರೆದು ಮನವರಿಕೆ ಮಾಡುತ್ತೇನೆ. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರಕರಣಗಳ ಬಗ್ಗೆ ಮಾತ್ರವೇ ಆಯಾ ಜಿಲ್ಲೆಗಳ ಎಸ್ಪಿಗಳು, ಡಿಜಿ ಅವರ ಸಮ್ಮುಖದಲ್ಲಿ ಸಭೆ ನಡೆಸಿ ಚರ್ಚಿಸಲಾಗುವುದು.
ನಂತರ ಅಗತ್ಯ ಬಿದ್ದರೆ ರಾಜ್ಯದ ಇತರೆ ಜಿಲ್ಲೆಗಳಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಸಭೆಯನ್ನು ನಡೆಸುವುದು ಗೃಹ ಮಂತ್ರಿಗಳಿಗೆ ಬಿಟ್ಟಿದ್ದು ಎಂದರು.
ಲಕ್ಷ್ಮಣರಾಜು ಅವರ ಮನೆ ಬಳಿ ದಾರಿಯಲ್ಲಿನ ವಿದ್ಯುತ್ ಕಂಬಕ್ಕೆ ಕಟ್ಟಿದ್ದ ಕಂಬಿಗೆ ತಾಗಿ ಲಕ್ಷ್ಮಣರಾಜು ಅವರು ಗಾಯಗೊಂಡಿರುವ ಪ್ರಕರಣವನ್ನು ನಾವು ಸುಲಭವಾಗಿ ನೋಡುವುದಲ್ಲ, ಗಂಭೀರವಾಗಿ ತೆಗೆದುಕೊಳ್ಳಬೇಕಿದ್ದು ಜಿಲ್ಲೆಯಲ್ಲಿನ ಇಂತಹ ಎಲ್ಲ ಪ್ರಕರಣಗಳ ಬಗ್ಗೆಯೂ ಗೃಹ ಮಂತ್ರಿಗಳ ಬಳಿ ಚರ್ಚಿಸಿ ಪರಿಹಾರ ತೆಗೆದುಕೊಳ್ಳೋಣ ಎಂದು ಹೇಳಿದರು.
ದಲಿತ ಮುಖಂಡರಾದ ವೆಂಕಟಸ್ವಾಮಿ ಗಂಗನಬೀಡು, ಬಿ.ಶಿವಪ್ಪ ಹಾಜರಿದ್ದರು.