Sidlaghatta : ಹಳ್ಳಿಗಳಲ್ಲಿನ ಕಾಲೋನಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುವ ಮತ್ತು ಅದರಿಂದ ನಾನಾ ರೀತಿಯಲ್ಲಿ ಉಪಟಳಗಳು ಹೆಚ್ಚುತ್ತಿರುವ ಬಗ್ಗೆ ಹೆಚ್ಚಿನ ದೂರುಗಳ ಬರುತ್ತಿವೆ ಎಂದು ಶಿಡ್ಲಘಟ್ಟದ ಸಿಪಿಐ ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದರು.
ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಹಮ್ಮಿಕೊಂಡಿದ್ದ ದಲಿತರ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿ, ಕಾಲೋನಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ಮತ್ತು ಕುಡಿದು ಗಲಾಟೆ ಗಲಭೆ ನಡೆಸಿ ಅಶಾಂತಿ ಉಂಟು ಮಾಡುವವರ ವಿರುದ್ದ ಕ್ರಮ ಕೈಗೊಳ್ಳುವ ಪೊಲೀಸರಿಗೆ ಕಾರ್ಯನಿರ್ವಹಿಸಲು ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಜಮೀನು ತಗಾದೆ, ಹಣಕಾಸಿನ ವಿಚಾರ ಅಥವಾ ಇನ್ನಾವುದೆ ವಿಚಾರಕ್ಕೆ ಗಲಾಟೆ ಅದರೆ ಠಾಣೆಯಲ್ಲಿ ದೂರು ನೀಡುವುದಕ್ಕೂ ಮೊದಲು ಗ್ರಾಮದಲ್ಲಿ ಹಿರಿಯರು ಎನಿಸಿಕೊಂಡವರು ಒಮ್ಮೆ ಎಲ್ಲರೂ ಕೂತು ಪರಸ್ಪರ ಚರ್ಚಿಸುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ಇದರಿಂದ ಗ್ರಾಮಗಳಲ್ಲಿ ಎಲ್ಲ ಜಾತಿ ಕೋಮು ಕುಟುಂಬಗಳ ನಡುವೆ ಶಾಂತಿ ಸೌಹಾರ್ಧತೆಯ ಹೆಚ್ಚುತ್ತದೆ ಕಾನೂನು ಸುವ್ಯವಸ್ಥೆ ಪಾಲಿಸಲು ಸಾಧ್ಯವಾಗಲಿದೆ ಎಂದರು.
ಸಭೆಗೆ ಆಗಮಿಸಿದ್ದ ದಲಿತ ಮುಖಂಡರು ಗ್ರಾಮೀಣ ಭಾಗದಲ್ಲಿ ದಲಿತರಿಗೆ ಎದುರಾಗುತ್ತಿರುವ ಹತ್ತು ಹಲವು ಸಮಸ್ಯೆಗಳನ್ನು ವಿವರಿಸಿದರು, ಪ್ರತಿ ತಿಂಗಳೂ ಕಡ್ಡಾಯವಾಗಿ ದಲಿತರ ಕುಂದುಕೊರತೆಗಳ ಸಭೆ ನಡೆಸುವಂತೆ ಮತ್ತು ಮುಂದಿನ ಸಭೆಗೆ ಎಲ್ಲ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸುವಂತೆ ಮಾಡಬೇಕೆಂದು ಕೋರಿದರು.
ಗ್ರಾಮಾಂತರ ಠಾಣೆಯ ಎಸ್‌ಐ ಸುನಿಲ್ ಕುಮಾರ್, ದಲಿತ ಸಂಘಟನೆಯ ಮುಖಂಡರಾದ ದ್ಯಾವಕೃಷ್ಣಪ್ಪ, ಚಲಪತಿ, ಕೃಷ್ಣಮೂರ್ತಿ, ದೇವರಾಜ್, ಚಲಪತಿ ಹಾಜರಿದ್ದರು.