Sidalghatta : ಕಡಲೆ ಪಪ್ಪು ಸ್ಯಾಂಪಲ್ ತೋರಿಸಿ ಐದು ಲಕ್ಷ ರೂ ಹಣ ಪಡೆದು ವಂಚಿಸಿದ್ದ ಪ್ರಕರಣವನ್ನು ಶಿಡ್ಲಘಟ್ಟದ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ತಿಳಿಸಿದರು.
ಶಿಡ್ಲಘಟ್ಟ ನಗರದ ಪೊಲೀಸ್ ಠಾಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹನ್ನೊಂದನೇ ಮೈಲಿ ಬಳಿ ನಡೆದ ಈ ಪ್ರಕರಣದಲ್ಲಿ ಹಣ ಕಳೆದುಕೊಂಡ ಎಸ್.ರಾಜ ಎಂಬುವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಬಾಳೇಗೌಡನಹಳ್ಳಿಯ ಶಾಂತಕುಮಾರ್ ಮತ್ತು ರಾಣಾ ರಾಜ ನಾಯಕ್ ಎಂಬುವರನ್ನು ದಸ್ತಗಿರಿ ಮಾಡಲಾಗಿದೆ ಎಂದು ಹೇಳಿದರು.
ಆರೋಪಿಗಳು ಮೋಸ ಮಾಡಿದ ಐದು ಲಕ್ಷ ಹಣದ ಪೈಕಿ ನಾಲ್ಕು ಲಕ್ಷ ರೂ ವಶಪಡಿಸಿಕೊಳ್ಳಲಾಗಿದೆ. ಇದೇ ಆರೋಪಿಗಳು ಅಸಲಿ ಚಿನ್ನ ತೋರಿಸಿ ನಕಲಿ ಚಿನ್ನ ನೀಡಿ ಮೋಸ ಮಾಡಿದ ಇನ್ನೊಂದು ಪ್ರಕರಣದಲ್ಲಿ 2,40,000 ರೂ ಪೈಕಿ ಹತ್ತು ಸಾವಿರ ರೂ ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯಗಳಲ್ಲಿ ಇನ್ನೂ ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರ ಶೋಧ ಕಾರ್ಯ ಮುಂದುವರೆದಿದೆ ಎಂದು ಹೇಳಿದರು.
ಚಿಂತಾಮಣಿ ಉಪವಿಭಾಗದ ಎ.ಎಸ್.ಪಿ ಕುಶಾಲ್ ಚೌಕ್ಸಿ ಮಾರ್ಗದರ್ಶನದಲ್ಲಿ ಸಿಪಿಐ ನಂದಮಾರ್ ಮತ್ತು ದಿಟ್ಟೂರಹಳ್ಳಿ ಪೊಲೀಸ್ ಠಾಣೆಯ ಪಿಎಸ್ ಐ ವೇಣುಗೋಪಾಲ್ ನೇತೃತ್ವದ ಅಪರಾಧ ತಂಡದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ನಂದಕುಮಾರ್, ಶಿವಣ್ಣ, ರಾಮಾಂಜಿನೇಯ, ಚಿಕ್ಕಣ್ಣ, ಚಂದಪ್ಪ ಯಲಿಗಾರ, ಸುನಿಲ್ ಜಮಾರ್, ಭೈರಪ್ಪ ಹಾಗೂ ತಾಂತ್ರಿಕ ಸಿಬ್ಬಂದಿ ರವಿಕುಮಾರ್, ಮುರಳಿಕೃಷ್ಣಪ್ಪ ಆರೋಪಿಗಳು ಮತ್ತು ಮಾಲನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.