Sidlaghatta : ಆನ್‌ಲೈನ್ ವಂಚನೆಯ ಘಟನೆಗಳು ವೇಗವಾಗಿ ಹೆಚ್ಚುತ್ತಿರುವ ಇಂತಹ ಸಮಯದಲ್ಲಿ ವೇಗವಾಗಿ ಜನರ ಹಣವನ್ನು ರಕ್ಷಿಸಲು ಈ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, 1930 ಸಂಖ್ಯೆಗೆ ಡಯಲ್ ಮಾಡುವ ಮೂಲಕ ಯಾವುದೇ ಸೈಬರ್ ಅಪರಾಧವನ್ನು ತತಕ್ಷಣ ವರದಿ ಮಾಡಬಹುದಾಗಿದೆ ಎಂದು ನಗರ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವೇಣುಗೋಪಾಲ್ ತಿಳಿಸಿದರು.
ನಗರದ ಕೋಟೆ ವೃತ್ತ ಮತ್ತು ರಾಜೀವ್ ಗಾಂಧಿ ಲೇಔಟ್ ನಲ್ಲಿ ಭಾನುವಾರ ಪೊಲೀಸ್ ಇಲಾಖೆಯಿಂದ 1930 ಸಹಾಯವಾಣಿ, 112 ಸಹಾಯವಾಣಿ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಅವರು ಮಾತನಾಡಿದರು.
1930 ಸಂಖ್ಯೆಗೆ ದೂರು ದಾಖಲಿಸಿದ ತತಕ್ಷಣೆವೇ ಆರಂಭದಲ್ಲಿ ವಂಚನೆ ಹಣಕಾಸಿನ ವಹಿವಾಟಿನ ಪ್ರಾಥಮಿಕ ವಿವರಗಳನ್ನು ಕೇಳಲಾಗುತ್ತದೆ, ನಂತರ ಕದ್ದ ಹಣವು ಎಲ್ಲಿಗೆ ವಹಿವಾಟು ಆಗಿದ್ದರೂ ಅದನ್ನು ರಕ್ಷಿಸಲು ಕಾರ್ಯವಿಧಾನವನ್ನು ಪ್ರಾರಂಭಿಸಲಾಗುತ್ತದೆ. ಇದಾದ ನಂತರ ಅಪರಾಧದ ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಜನರು ಸೈಬರ್ ವಂಚನೆಗೆ ಬಲಿಯಾಗದಂತೆ ಮುನ್ನೆಚ್ಚರಿಕೆಗಳನ್ನು ಹೊಂದಿರಬೇಕು ಎಂದು ವಿವರಿಸಿದರು.
ಯಾವುದೇ ರೀತಿಯ ಅಪರಾಧ ಕೃತ್ಯಗಳು, ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಪೊಲೀಸರು ಧಾವಿಸಿ ಕ್ರಮ ಕೈಗೊಳ್ಳುವ 112 ಪೊಲೀಸ್ ಸಹಾಯವಾಣಿ ಬಗ್ಗೆ ಜನರು ತಿಳಿದಿರಬೇಕು. ಈ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ವಿವರಿಸಿದರೆ, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ಸಮಸ್ಯೆ ಬಗೆಹರಿಸುತ್ತಾರೆ. ತುರ್ತು ಸಮಯದಲ್ಲಿ 112ಕ್ಕೆ ಕರೆ ಮಾಡಿ ಎಂದು ಮನವಿ ಮಾಡಿದರು.
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿ, ಆಟೋ ಚಾಲಕರು ವಾಹನದ ಸೂಕ್ತ ದಾಖಲಾತಿಗಳನ್ನು ಹೊಂದಿರಬೇಕು, ವಿಮೆ ಮಾಡಿಸಿರಬೇಕು ಎಂದು ಹೇಳಿದರು.
ಪಿಎಸ್ಐ ವೇಣುಗೋಪಾಲ್, ಎ ಎಸ್ ಐ ನವಾಜ್ ಅಹಮದ್, ಬೀಟ್ ಪೊಲೀಸ್ ಉಮಾಶಂಕರ್, ಅಶೋಕ್ ಬಾಬು, ಹರಿನಾಥ್ ಹಾಜರಿದ್ದರು.