Sidlaghatta : PLD Bank ನಲ್ಲಿ ಕೃಷಿ ಚಟುವಟಿಕೆಗಾಗಿ ಸಾಲ ಪಡೆದು ಸುಸ್ತಿದಾರರಾಗಿರುವ ರೈತರು ಇದೆ ಫೆ.29 ರೊಳಗೆ ಅಸಲು ಪಾವತಿಸಿದರೆ ಸಾಲದ ಮೇಲಿನ ಬಡ್ಡಿ ಮನ್ನಾ ಆಗಲಿದೆ ಎಂದು ಶಿಡ್ಲಘಟ್ಟದ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದಿಬ್ಬೂರಹಳ್ಳಿ ಡಿ.ಸಿ.ರಾಮಚಂದ್ರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, PLD Bank ನಿಂದ ಕೃಷಿ ಚಟುವಟಿಕೆಗಳಿಗಾಗಿ ಸಾಲ ಪಡೆದು ಸುಸ್ತಿದಾರರಾಗಿರುವ ರೈತರು ಸಾಲದ ಮೊತ್ತವನ್ನು ಪೂರ್ಣವಾಗಿ ಮರುಪಾವತಿಸಿದರೆ ಸಾಲದ ಮೇಲಿನ ಬಡ್ಡಿಯನ್ನು ಸರಕಾರ ಮನ್ನಾ ಮಾಡಲಿದೆ ಎಂದು ಹೇಳಿದರು.
ಫೆ.29 ಕಡೆಯ ದಿನವಾಗಿದ್ದು ಈಗಾಗಲೆ ಈ ಬಗ್ಗೆ ಎಲ್ಲ ಸುಸ್ತಿದಾರ ಸಾಲಗಾರರಿಗೂ ಮಾಹಿತಿ ನೀಡಲಾಗಿದೆ. ನಮ್ಮ ಬ್ಯಾಂಕಿನಿಂದ 369 ರೈತರು ಕೃಷಿಯ ನಾನಾ ಚಟುವಟಿಕೆಗಳಿಗೆ 4.10 ಕೋಟಿ ರೂ.ಸಾಲ ನೀಡಲಾಗಿದೆ ಎಂದು ವಿವರಿಸಿದರು.
ಸಾಲದ ಮೇಲಿನ ಬಡ್ಡಿ ಮನ್ನಾ ಯೋಜನೆ ಘೋಷಣೆಯಾದ ಬಳಿಕ 99 ಮಂದಿ ರೈತ ಸುಸ್ತಿದಾರರು ಸಾಲದ ಮೊತ್ತ 1.26 ಕೋಟಿ ರೂ.ಗಳನ್ನು ಪರುಪಾವತಿ ಮಾಡಿದ್ದು ಇವರ ಸಾಲದ ಮೇಲಿನ ಬಡ್ಡಿ 1.35 ಕೋಟಿ ರೂ. ಮನ್ನಾ ಆಗಿದೆ ಎಂದು ವಿವರ ನೀಡಿದರು.
ಇನ್ನುಳಿದ 270 ಮಂದಿ ಸುಸ್ತಿದಾರರು 2.95 ಕೋಟಿ ರೂ.ಸುಸ್ತಿ ಸಾಲ ಉಳಿಸಿಕೊಂಡಿದ್ದು ಇದನ್ನು ಫೆ.29ರೊಳಗೆ ಮರುಪಾವತಿ ಮಾಡಿದರೆ ಇದರ ಬಾಬ್ತು 3.18 ಕೋಟಿ ರೂ.ಬಡ್ಡಿ ಮನ್ನಾ ಆಗಲಿದ್ದು ಸರ್ಕಾರದ ಈ ಸುಸ್ತಿದಾರರ ಸಾಲದ ಮೇಲಿನ ಬಡ್ಡಿ ಮನ್ನಾ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಬ್ಯಾಂಕ್‌ನ ಅಧ್ಯಕ್ಷ ಡಿ.ಸಿ.ರಾಮಚಂದ್ರ ತಿಳಿಸಿದ್ದಾರೆ.