Sidlaghatta : ಸ್ವಚ್ಚತೆ ನೈರ್ಮಲ್ಯವನ್ನು ಕಾಪಾಡಿ ನಮ್ಮ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಗರಸಭೆಯೊಂದಿಗೆ ನಗರದಲ್ಲಿನ ಎಲ್ಲ ನಾಗರಿಕರು ಕೈಜೋಡಿಸಿದಾಗ ಮಾತ್ರವೇ ಸಾಧ್ಯ. ನಿಮ್ಮ ಸಹಕಾರ ಇಲ್ಲದೆ ಸರ್ಕಾರ, ನಗರಸಭೆ ಏನೂ ಮಾಡಲಾಗದು ಎಂದು ಯೋಜನಾ ನಿರ್ದೇಶಕ ಸಂತೋಷ್ ಕುಮಾರ್ ತಿಳಿಸಿದರು.
ನಗರದಲ್ಲಿನ ಕೋಟೆ ವೃತ್ತದಲ್ಲಿ ಬುಧವಾರ ಸ್ವಚ್ಚತಾ ಕಾರ್ಯಕ್ರಮ ಕುರಿತು ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿದೆ. ಅಂದ ಮಾತ್ರಕ್ಕೆ ನಿಮ್ಮೆಲ್ಲರ ಸಹಕಾರ ಇದ್ದರೆ ಮಾತ್ರವೇ ಪ್ಲಾಸ್ಟಿಕ್ ಮುಕ್ತ ಜಿಲ್ಲೆ ನಿರ್ಮಾಣವಾಗುತ್ತದೆ ಎಂದರು.
ಮನೆ ಅಂಗಡಿ ಹೋಟೆಲ್‌ಗಳಲ್ಲಿ ಕಸವನ್ನು ಒಣ ಕಸ ಹಸಿ ಕಸವನ್ನಾಗಿ ಪ್ರತ್ಯೇಕಿಸಿ ನಗರಸಭೆ, ಪುರಸಭೆಯ ಕಸದ ವಾಹನಗಳಿಗೆ ನೀಡಿದಾಗ ಮಾತ್ರ ನಗರದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬಹುದು ಇಲ್ಲವಾದಲ್ಲಿ ಇಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಮತ್ತು ಸ್ವಚ್ಚ ಜಿಲ್ಲೆಯನ್ನಾಗಿ ಮಾಡಲು ಪಣತೊಟ್ಟಿದ್ದು ಜಿಲ್ಲಾಡಳಿತವು ಈ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ. ಜಿಲ್ಲಾಡಳಿತದೊಂದಿಗೆ ನಾಗರಿಕರು ಕೈ ಜೋಡಿಸಿದಾಗ ಮಾತ್ರ ಜಿಲ್ಲೆಯು ಪ್ಲಾಸ್ಟಿಕ್ ಮುಕ್ತ ಮತ್ತು ಸ್ವಚ್ಚ ಜಿಲ್ಲೆ ಆಗಲಿದೆ ಎಂದು ಆಶಿಸಿದರು.
ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿ, ಜನಪ್ರತಿನಿಗಳು ಪ್ರಾಮಾಣಿಕ ಪ್ರಯತ್ನ ನಡೆಸಿ ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟದ ದಿನಗಳನ್ನು ನಾವು ನೀವೆಲ್ಲರೂ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಲಾವಿದರ ತಂಡವು ವಿಶೇಷ ವೇಷಭೂಷಣ ತೊಟ್ಟು ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಬೀದಿ ನಾಟಕದ ಮೂಲಕ ಮನವರಿಕೆ ಮಾಡಿಕೊಟ್ಟರು.
ನಗರಸಭೆ ಪೌರಾಯುಕ್ತ ಮಂಜುನಾಥ್, ನಗರಸಭೆ ಸದಸ್ಯರಾದ ಅನಿಲ್ ಕುಮಾರ್, ನಾರಾಯಣಸ್ವಾಮಿ, ಎಸ್.ಮಂಜುನಾಥ್, ಮೌಲಾ, ಫುಡ್ ಮನೋಹರ್ ಹಾಜರಿದ್ದರು.