ಶಿಡ್ಲಘಟ್ಟ ತಾಲ್ಲೂಕಿನ ಪೆಂಡ್ಲಿವಾರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಗ್ರಾಮದ ಯುವಜನರ ಸಹಯೋಗದಲ್ಲಿ ಉಸಿರಿಗಾಗಿ ಹಸಿರು ಟ್ರಸ್ಟಿನ ಸದಸ್ಯರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಸಸಿನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಉಸಿರಿಗಾಗಿ ಹಸಿರು ಟ್ರಸ್ಟಿನ ಕಾರ್ಯಕಾರಿ ಟ್ರಸ್ಟಿ ಗಂಗಾಧರ್ ರೆಡ್ಡಿ ಮಾತನಾಡಿದರು.
ಪರಿಸರ ಸಂರಕ್ಷಣೆ ಮಾಡುವ ಕಾರ್ಯ ಬಹಳ ಅನನ್ಯವಾಗಿದ್ದು, ಇದು ಅತ್ಯಂತ ಕಠಿಣವೂ ಆಗಿದೆ. ಈ ಕಾರ್ಯವನ್ನು ಎಲ್ಲರೂ ಕೈಗೊಳ್ಳಲು ಸಾಧ್ಯವಿಲ್ಲ. ಇಚ್ಛಾಶಕ್ತಿ ಇರುವವರು ಹಾಗೂ ಪರಿಸರದ ಬಗ್ಗೆ ಅಪಾರ ಪ್ರೇಮವಿರುವವರು ಮಾತ್ರ ಪರಿಸರ ಸಂರಕ್ಷಣೆಗೆ ಮುಂದಾಗುವರು ಎಂದು ಅವರು ತಿಳಿಸಿದರು.
ಸಸಿನೆಡುವ ಮಾತ್ರಕ್ಕೆ ಪರಿಸರ ಸಂರಕ್ಷಣಾ ಪೂರ್ಣಗೊಳ್ಳುವುದಿಲ್ಲ. ಬದಲಿಗೆ ಅದನ್ನು ಕನಿಷ್ಠ ಎರಡು ವರ್ಷಗಳ ಕಾಲ ಪೋಷಿಸಿದಾಗ ಮಾತ್ರ ಅದು ಪೂರ್ಣವಾಗುತ್ತದೆ. ಪರಿಸರ ಸಂರಕ್ಷಣೆ ಎಂಬ ಬೀಜವನ್ನು ಮಕ್ಕಳ ಮನಸ್ಸುಗಳಲ್ಲಿ ಬಿತ್ತುವ ಮೂಲಕ ಪರಿಸರ ಕಾಳಜಿ ಬೆಳೆಸುವ ಉದ್ದೇಶದಿಂದ ಉಸಿರಿಗಾಗಿ ಹಸಿರು ಟ್ರಸ್ಟ್ ಶಾಲೆಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯವನ್ನು ಕಳೆದ ಆರು ವರ್ಷಗಳಿಂದ ಕೈಗೊಳ್ಳುತ್ತಿದೆ. ಇದರ ಫಲವಾಗಿ ಇಂದು ರಾಜ್ಯದ ರಾಜ್ಯದ ಬಯಲು ಸೀಮೆಯ ನೂರಾರು ಶಾಲೆಗಳು ಹಸಿರು ಶಾಲೆಗಳಾಗಿ ಕಂಗೊಳಿಸುತ್ತಿವೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹಸಿರಾಗಿಟ್ಟುಕೊಳ್ಳುವ ಜೊತೆಗೆ ಪ್ಲಾಸ್ಟಿಕ್ ಮುಕ್ತ ವಾತಾವರಣವನ್ನು ನಿರ್ಮಿಸುವುದೂ ಸಹ ಪರಿಸರ ಸೇವೆಯೇ ಆಗಿದೆ ಎಂದರು.
ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಿಸುವುದು ಇಂದಿನ ಅನಿವಾರ್ಯವಾಗಿದ್ದು ಪ್ರತಿಯೊಬ್ಬರೂ ಸಹಕರಿಸಿದರೆ ಮಾತ್ರ ಆರೋಗ್ಯಕರ ವಾತಾವರಣವನ್ನು ನಿರ್ಮಿಸಬಹುದು ಎಂದು ಹೇಳಿದರು.
ಮುಖ್ಯ ಶಿಕ್ಷಕಿ ಉಷಾ ಹಾಗೂ ಸಹ ಶಿಕ್ಷಕ ಚನ್ನಕೃಷ್ಣ ಮಾತನಾಡಿ, ಇಂದು ನೆಟ್ಟ ಸಸಿಗಳನ್ನು ಮಕ್ಕಳಂತೆ ಪೋಷಿಸಿ ಮುಂದಿನ ದಿನಗಳಲ್ಲಿ ಬೃಹತ್ ಮರಗಳನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮದ ಯುವಜನರ ಹಾಗೂ ಮಕ್ಕಳ ಸಹಯೋಗದೊಂದಿಗೆ ಶ್ರಮಿಸುವುದಾಗಿ ತಿಳಿಸಿದರು.
ಶಾಲಾವರಣ ಹಾಗೂ ಶಾಲೆಯನ್ನು ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲಿ ವಿವಿಧ ಪ್ರಭೇಧದ ಒಟ್ಟು 70 ಸಸಿಗಳನ್ನು ನೆಡಲಾಯಿತು. ಗುಲ್ ಮೊಹರ್, ಸ್ಪೆಥೋಡಿಯಾ, ಆಫ್ರಿಕನ್ ತುಲಿಪ್, ನೇರಳೆ, ಹೊಂಗೆ, ಹೂವರಸಿ, ಹುಣಸೆ, ಸಿಲ್ವರ್ ಓಕ್, ಸೀತಾಫಲ, ನಿಂಬೆ ಮೊದಲಾದ ಸಸಿಗಳನ್ನು ನೆಟ್ಟು ಅವುಗಳ ಸಂರಕ್ಷಣೆಗೆ ತಂತಿಬೇಲಿಯನ್ನು ಸಿದ್ಧಪಡಿಸಿದರು.
ಸಸಿಗಳ ಸಂರಕ್ಷಣೆಗಾಗಿ ತಂತಿ ಬೇಲಿಯನ್ನು ಕೊಡುಗೆಯಾಗಿ ನೀಡಿದ ಕದಿರಾರೆಡ್ಡಿ, ಟ್ರಸ್ಟಿನ ಸದಸ್ಯರಾದ ಸಿ.ಕೆ.ರಾಮಾಂಜಿನಪ್ಪ, ರಾಹುಲ್, ಗ್ರಾಮದ ಯುವಜನರು ಮತ್ತು ಶಾಲೆಯ ಶಾಲೆಯ ಮಕ್ಕಳು ಗಿಡ ನೆಡುವ ಕಾರ್ಯದಲ್ಲಿ ಭಾಗಿಯಾಗಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi