Pendlivarahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗಡಿ ಗ್ರಾಮವಾದ ಪೆಂಡ್ಲಿವಾರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು, ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟಿನ ಸಂಪಾದಕ ಮಧುಸೂದನ ಸಾಯಿ 45 ನೇ ಜನ್ಮದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದಲ್ಲಿ ನಡೆಸಿದ ಸ್ಪರ್ಧೆಯಲ್ಲಿ ಭಾಗವಹಿಸಿ, ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಪ್ರಶಸ್ತಿಯು ₹ 10,000 ನಗದು, ಆಕರ್ಷಕ ಉಡುಗೊರೆಗಳು, ಮಕ್ಕಳಿಗೆ ಮೌಲ್ಯ ಶಿಕ್ಷಣದ ಅಭ್ಯಾಸ ಪುಸ್ತಕ, ಹಾಗೂ ಸಿಹಿಯನ್ನು ಒಳಗೊಂಡಿದೆ.
ಶಾಲಾ ಆವರಣದಲ್ಲಿ ಸ್ಥಳಾವಕಾಶವಿಲ್ಲದಿದ್ದರೂ ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಇರುವ ಸ್ಥಳದಲ್ಲೆ ಗಿಡ ಮರ ನೆಟ್ಟು ಬೆಳೆಸಲಾಗಿದೆ. ಅಲ್ಲದೆ ಉಸಿರಿಗಾಗಿ ಹಸಿರು ಟ್ರಸ್ಟ್ ಸಹಕಾರದಿಂದ ಶಾಲೆಯ ಮುಂದಿನ ರಸ್ತೆಯ ಇಕ್ಕೆಲಗಳಲ್ಲಿ ಗಿಡನೆಟ್ಟು ನಾಲ್ಕು ವರ್ಷಗಳ ಕಾಲ ಶಿಕ್ಷಕರು ಮತ್ತು ಮಕ್ಕಳು ಪ್ರೀತಿಯಿಂದ ಪೋಷಿಸಿದ್ದಕ್ಕಾಗಿ ಇಂದು ಅವು ದೊಡ್ಡ ಮರಗಳಾಗಿವೆ. ಹಾಗೆಯೇ ದಾನಿಗಳ ಸಹಾಯದಿಂದ ಕೊಠಡಿ ನಿರ್ಮಾಣ, ಸುಣ್ಣ ಬಣ್ಣ ಹಾಗೂ ಇಲಾಖೆಯ ರಿಪೇರಿ ಅನುದಾನಗಳಿಂದ ಶಾಲಾ ಆವರಣ ಅಚ್ಚುಕಟ್ಟಾದ ಟೈಲ್ಸ್ ಗಳಿಂದ ಸುಂದರವಾಗಿ ಅಣಿಗೊಂಡಿದೆ ಹಾಗೂ ಸ್ವಚ್ಛವಾಗಿದೆ.
“ಶಾಲೆಯನ್ನು ಸ್ವಚ್ಛಗೊಳಿಸಿ ಹಸಿರಿನಿಂದ ಕಂಗೊಳಿಸುವಂತೆ ಮಾಡುವುದು ಎಲ್ಲ ಶಿಕ್ಷಕರ ಪ್ರಥಮ ಆದ್ಯತೆಯಾಗಿದೆ. ಹೀಗೆ ನಮ್ಮ ಸರ್ಕಾರಿ ಶಾಲೆಗಳನ್ನು ಗುರುತಿಸಿ ಎಲ್ಲ ರೀತಿಯಲ್ಲೂ ಪ್ರೋತ್ಸಾಹಿಸುತ್ತಿರುವ “ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್” ನವರಿಗೆ ನಾವು ಅಭಾರಿಯಾಗಿದ್ದೇವೆ. ಎಂದು ಪ್ರಶಸ್ತಿ ಸ್ವೀಕರಿಸಿದ ಶಾಲೆಯ ಸಹಶಿಕ್ಷಕರು ಚನ್ನಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.