ಶಿಡ್ಲಘಟ್ಟ ನಗರದಲ್ಲಿ ಸೋಮವಾರ ಸರ್ಕಾರಿ ಆಸ್ಪತ್ರೆಗೆ 10 ಆಮ್ಲಜನಕ ಸಿಲಿಂಡರ್ ಗಳನ್ನು ಹಸ್ತಾಂತರ ಮಾಡಿ ಕಾಂಗ್ರೆಸ್ ಮುಖಂಡ, ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ಮಾತನಾಡಿದರು
ಆಮ್ಲಜನಕ ಈಗ ಅಮೃತ ಸಮಾನವಾಗಿದೆ. ನಮ್ಮ ಶಿಡ್ಲಘಟ್ಟ ಕ್ಷೇತ್ರದಲ್ಲಿ ಯಾರೊಬ್ಬರೂ ಆಮ್ಲಜನಕದ ಕೊರತೆಯಿಂದ ಪ್ರಾಣ ಕಳೆದುಕೊಳ್ಳಬಾರದು. ಈಗ ಹತ್ತು ಆಮ್ಲಜನಕ ಸಿಲಿಂಡರ್ ಗಳನ್ನು ಸರ್ಕಾರಿ ಆಸ್ಪತ್ರೆಗೆ ನೀಡುತ್ತಿದ್ದು, ಮುಂದಿನವಾರ ಇನ್ನೂ ಹತ್ತು ಸಿಲಿಂಡರ್ ಗಳನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಸರ್ಕಾರ, ವೈದ್ಯಕೀಯ ಸಿಬ್ಬಂದಿ, ತಾಲ್ಲೂಕು ಆಡಳಿತ ಕೋವಿಡ್ ವಿರುದ್ಧ ಹಗಲಿರುಳು ಹೋರಾಟ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳಾದ ನಾವು ಇಂತಹ ಸಂದರ್ಭಗಳಲ್ಲಿ ಜನರಿಗೆ ಸಾಧ್ಯವಾದಷ್ಟು ನೆರವಾಗಬೇಕಾದ್ದು ಧರ್ಮ. ಸರ್ಕಾರಿ ಆಸ್ಪತ್ರೆಗೆ ಮತ್ತು ರೋಗಿಗಳಿಗೆ ಬೇಕಾದ ಔಷಧ, ಆಹಾರ, ಆಮ್ಲಜನಕ ಒದಗಿಸಲು ಸಂಪೂರ್ಣ ಸಹಕಾರ ನೀಡುತ್ತೇನೆ. ಪಾಸಿಟಿವ್ ಆದವರು ವೈದ್ಯರ ಮಾರ್ಗದರ್ಶನ ಪಡೆದು ಧೈರ್ಯದಿಂದ ಎದುರಿಸಿ. ಸರ್ಕಾರ ನೀಡುತ್ತಿರುವ ಕೋವಿಡ್ ಲಸಿಕೆಯ ಬಗ್ಗೆ ತಜ್ಞರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. 45 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಂಡು ಕೊರೊನಾ ವಿರುದ್ಧ ಹೋರಾಡಲು ಸಜ್ಜಾಗಬೇಕು ಎಂದರು.
ತಹಶೀಲ್ದಾರ್ ರಾಜೀವ್ ಮಾತನಾಡಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲರ ಸಹಕಾರ ಅಗತ್ಯ. ಜನಪ್ರತಿನಿಧಿಗಳು ಈ ರೀತಿಯಲ್ಲಿ ತಾಲ್ಲೂಕು ಆಡಳಿತ ಮತ್ತು ಸರ್ಕಾರಿ ಆಸ್ಪತ್ರೆಗೆ ಸಹಕಾರ ನೆರವು ನೀಡಿದಲ್ಲಿ ಕೋವಿಡ್ ರೋಗವನ್ನು ಸಶಕ್ಷಮವಾಗಿ ಎದುರಿಸಬಹುದು ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ ಮಾತನಾಡಿ, ನಮ್ಮಲ್ಲಿ 40 ಕೋವಿಡ್ ಹಾಸಿಗೆಗಳಿದ್ದು ಎಲ್ಲಾ ಭರ್ತಿಯಾಗಿವೆ. 34 ಆಮ್ಲಜನಕ ಸಿಲಿಂಡರ್ ಗಳಿವೆ. ಪ್ರತಿದಿನ 25 ಸಿಲಿಂಡರ್ ಗಳ ಅಗತ್ಯವಿದೆ. ಖಾಲಿಯಾದಾಗ ತುಂಬಿಸಿ ತರಲು ತಡವಾಗುತ್ತಿತ್ತು. ಈಗ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಅವರು 10 ಸಿಲಿಂಡರ್ ನೀಡಿರುವುದು ನಮಗೆ ತುಂಬಾ ಅನುಕೂಲಕರವಾಗಿದೆ. ಇನ್ನೂ 10 ಸಿಲಿಂಡರ್ ನೀಡುವುದಾಗಿ ಹೇಳಿದ್ದಾರೆ ಎಂದರು.
ನಗರ ಆರೋಗ್ಯಧಿಕಾರಿ ಡಾ.ವಾಣಿ, ನಗರ ಸಭೆ ಸದಸ್ಯ ಶಬೀರ್, ಎಸ್ ಎನ್ ಕ್ರಿಯಾ ಟ್ರಸ್ಟ್ ನ ಸದಸ್ಯರಾದ ಆನೂರು ದೇವರಾಜು, ಆನಂದ್, ಸುಮೀರ್, ಇತ್ತಿಯಾಸ್ ಪಾಷ್, ಮಹ್ಮಬುಬ್ ಪಾಷ್, ಜಮೀರ್, ಚಾಂದ್ ಪಾಷ್, ಅಫ್ಸರ್ ಹಾಜರಿದ್ದರು