Sidlaghatta : ರೈತರು ಕೃಷಿಯಲ್ಲಿ ತಾಂತ್ರಿಕತೆ ಪದ್ದತಿಗಳನ್ನು ಹೆಚ್ಚಿಸಿ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬೇಕು, ಹಾಗೆಯೆ ರಾಸಾಯನಿಕ ಬಳಕೆ ಕಡಿಮೆ ಮಾಡಿ ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಂಡು ಕೃಷಿಯನ್ನು ಲಾಭದಾಯಕವಾಗಿ ಮಾಡಬೇಕೆಂದು ಕೃಷಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ.ಟಿ.ಸಂಜಯ್ ತಿಳಿಸಿದರು.
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ನೈಸರ್ಗಿಕ ಕೃಷಿ ಪ್ರಾದೇಶಿಕ ಕೇಂದ್ರ, ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆಯ ಸಮಗ್ರ ಕೃಷಿ ಪದ್ಧತಿಯಡಿ ತಾಲ್ಲೂಕಿನ ಚಿಂತಡಪಿ ಗ್ರಾಮದಲ್ಲಿ ನಡೆದ ನೈಸರ್ಗಿಕ ಕೃಷಿ ಕುರಿತು ರೈತರಿಗೆ ತರಬೇತಿಯಲ್ಲಿ ಅವರು ಮಾತನಾಡಿದರು.
ಕೃಷಿ ತಜ್ಞರು, ವಿಜ್ಞಾನಿಗಳು, ಅಧಿಕಾರಿಗಳಿಗಿಂತಲೂ ಹೊಲ ಗದ್ದೆ ಜಮೀನುಗಳಲ್ಲಿ ಕೃಷಿ ಕಾಯಕ ಮಾಡುವ ರೈತರೇ ವಿಜ್ಞಾನಿಗಳಿಗಿಂತಲೂ ಮೇಲು. ಆದರೂ ಕಾಲ ಕಾಲಕ್ಕೆ ಕೃಷಿಯಲ್ಲೂ ಅನೇಕ ಬದಲಾವಣೆಗಳು ಆಗುತ್ತಿವೆ. ತಾಂತ್ರಿಕತೆ ಪದ್ದತಿಗಳು ಆವಿಷ್ಕಾರವಾಗುತ್ತಿವೆ.
ಗುಣಮಟ್ಟದ ಗೊಬ್ಬರಗಳು, ಜೈವಿಕ ನಿಯಂತ್ರಣ ಪದ್ದತಿಗಳನ್ನು ತಜ್ಞರು ಆವಿಷ್ಕರಿಸುತ್ತಿದ್ದು ಅವುಗಳನ್ನು ತಿಳಿದುಕೊಂಡು ಕಡಿಮೆ ವೆಚ್ಚದಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಫಸಲನ್ನು ಪಡೆಯುವಂತಾಗಬೇಕು. ಆಗಲೆ ಕೃಷಿಯು ಲಾಭದಾಯಕವಾಗುತ್ತದೆ ಎಂದರು. ಈ ನಿಟ್ಟಿನಲ್ಲಿ ನೈಸರ್ಗಿಕ ಪದ್ದತಿಯ ಕೃಷಿಗೆ ಹೆಚ್ಚು ಒತ್ತು ನೀಡಬೇಕಿದ್ದು ಈ ಪದ್ದತಿಯಿಂದ ಆಗುವ ಉಪಯೋಗಗಳ ಬಗ್ಗೆ ವಿವರಿಸಿದರು.
ನೈಸರ್ಗಿಕ ಪದ್ದತಿಯಲ್ಲಿ ಬಳಸುವ ಜೀವಾಮೃತ, ಬೀಜಾಮೃತ, ಘನಜೀವಾಮೃತ, ಅಗ್ನಿಅಸ್ತ್ರ, ಬ್ರಹ್ಮಾಸ್ತ್ರ, ಹುಳಿ ಮಜ್ಜಿಗೆ ತಯಾರಿಸುವ ವಿಧಾನವನ್ನು ರೈತರಿಂದಲೆ ತಿಳಿಸಿಕೊಡಲಾಯಿತು.
ಸಹಾಯಕ ಪ್ರಾಧ್ಯಾಪಕ ಡಾ.ಅಂಜನ್ ಕುಮಾರ್ ಮಾತನಾಡಿ, ನೈಸರ್ಗಿಕ ಕೃಷಿಯಲ್ಲಿ ಖರ್ಚು ಕಡಿಮೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು. ರೈತರು ತಮ್ಮ ಮೊಬೈಲ್ ಗಳ ಮುಖಾಂತರ ವಿವಿಧ ಮಾರುಕಟ್ಟೆಯ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡು ನೈಸರ್ಗಿಕ ಕೃಷಿಯಲ್ಲಿ ಬೆಳೆದ ಉತ್ಪನ್ನಗಳಿಗೆ ಹೆಚ್ಚಿನ ಬೆಲೆಯನ್ನು ಪಡೆಯುವ ಅವಕಾಶಗಳು ಹೇರಳವಾಗಿವೆ ಎಂದು ವಿವರಿಸಿದರು. ಆನ್-ಲೈನ್ ಮಾರುಕಟ್ಟೆಯಲ್ಲಿ ರೈತರು ದೇಶ ಮತ್ತು ವಿದೇಶಗಳ ಗ್ರಾಹಕರನ್ನು ತಲುಪುವ ಸುಸಜ್ಜಿತ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.
ನೈಸರ್ಗಿಕ ಕೃಷಿ ಪ್ರಾದೇಶಿಕ ಕೇಂದ್ರದ ಕಿರಿಯ ವಿಜ್ಞಾನಿ ಡಾ.ಪೂಜಾ ಕನ್ನೋಜಿಯಾ ಅವರು ನೈಸರ್ಗಿಕ ಕೃಷಿಯ ದೃಢೀಕರಣದ ನೀತಿ ನಿಯಮ, ಕಾನೂನು ಕಟ್ಟಲೆಗಳ ಬಗ್ಗೆ ರೈತರಿಗೆ ವಿವರಿಸಿದರು.
ಗ್ರಾಮದ ರೈತರಿಗೆ ಈಗಾಗಲೆ ನೈಸರ್ಗಿಕ ಕೃಷಿಯನ್ನು ನಡೆಸುತ್ತಿರುವ ರೈತರಿಂದಲೆ ನೈಸರ್ಗಿಕ ಕೃಷಿ ಕುರಿತು ಪ್ರಾತಕ್ಷಿಕೆ ಮೂಲಕ ತಿಳಿಸಿಕೊಟ್ಟರು. ಜೀವಾಮೃತ, ಬೀಜಾಮೃತ, ಘನಜೀವಾಮೃತ, ಅಗ್ನಿಅಸ್ತ್ರ, ಬ್ರಹ್ಮಾಸ್ತ್ರ, ಹುಳಿ ಮಜ್ಜಿಗೆ ತಯಾರಿಸುವ ವಿಧಾನವನ್ನು ಸ್ಥಳದಲ್ಲೆ ಪ್ರದರ್ಶಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯ ಮಾರುತಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಕಕ್ಷ ಸುರೇಶ್, ರಾಮಾಂಜನೇಯ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು, ರೈತರು ಭಾಗವಹಿಸಿದ್ದರು.