Home Education ಶಿಡ್ಲಘಟ್ಟದ ಶಾಲೆಯಲ್ಲಿ ನೂತನ ಬೋಧನಾ ಕ್ರಮ ಅಳವಡಿಕೆ

ಶಿಡ್ಲಘಟ್ಟದ ಶಾಲೆಯಲ್ಲಿ ನೂತನ ಬೋಧನಾ ಕ್ರಮ ಅಳವಡಿಕೆ

ಆನ್ ಲೈನ್ ಮತ್ತು ಆಫ್ ಲೈನ್ ಅಂಶಗಳನ್ನೊಳಗೊಂಡ ವರ್ಚುವಲ್ ತರಗತಿಯ ಪ್ರಯೋಗ

0

ಕೋವಿಡ್ ಕಾರಣದಿಂದ ಅನೇಕ ಶಿಕ್ಷಣ ಸಂಸ್ಥೆಗಳು ಆನ್ ಲೈನ್ ತರಗತಿಗಳ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಕೆಲವೆಡೆಯಂತೂ ಫೀಸ್ ಪಡೆಯಲು ಕದ್ದೂ ಮುಚ್ಚಿ ಮಕ್ಕಳನ್ನು ಶಾಲೆಗೆ ಕರೆಸಿ ಪಾಠ ನಡೆಸುವ ನಾಟಕವೂ ನಡೆದಿದೆ.
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೆಟ್ ವರ್ಕ್ ಇರುವುದಿಲ್ಲ, ಒಂದೇ ಮನೆಯಲ್ಲಿ ಇಬ್ಬರು ಮೂವರು ಮಕ್ಕಳಿದ್ದಾಗ ಮೊಬೈಲ್ ಹಂಚಿಕೊಳ್ಳುವ ಸಮಸ್ಯೆ, ಪಾಠ ತಪ್ಪಿಸಿಕೊಂಡರೆ ಮತ್ತೆ ಕೇಳಲಾಗದು, ಮಕ್ಕಳು ಎಷ್ಟು ಕಲಿತಿದ್ದಾರೆ ತಿಳಿಯಲಾಗದು. ಮಕ್ಕಳ ಹಾಜರಾತಿಯಿಲ್ಲ, ಇಂಟರ್ ನೆಟ್ ಗಾಗಿ ಮಾಡುವ ಖರ್ಚು ಮುಂತಾದ ತೊಂದರೆಗಳಿಂದ ಆನ್ ಲೈನ್ ಶಿಕ್ಷಣ ನೀರಿನ ಮೇಲಿನ ಗುಳ್ಳೆಯಾಗಿದೆ.
ಮಕ್ಕಳು ಶಾಲೆಗೆ ಬರಲಾಗದ ಈ ಪರಿಸ್ಥಿತಿಯಲ್ಲಿ ಶಾಲೆಯನ್ನೇ, ಪಾಠವನ್ನೇ, ಶಿಕ್ಷಕರ ಜೊತೆಗೆ ಮಕ್ಕಳ ಬಳಿ ತೆಗೆದುಕೊಂಡು ಹೋಗುವ ವಿನೂತನ ತಂತ್ರಾಂಶವನ್ನು ಶಿಡ್ಲಘಟ್ಟದ ದಿ ಕ್ರೆಸೆಂಟ್ ಶಾಲೆ “ಆಪ್ಟಿಮಾ ಸಾಫ್ಟ್ ವೇರ್ ಸೊಲ್ಯೂಷನ್ಸ್” ಅವರ ಸಹಯೋಗದಲ್ಲಿ ಅಭಿವೃದ್ದಿ ಪಡಿಸಿದೆ. ಆನ್ ಲೈನ್ ಮತ್ತು ಆಫ್ ಲೈನ್ ಎರಡರ ಸಕಾರಾತ್ಮಕ ಗುಣಗಳನ್ನು ಜೊತೆಗೂಡಿಸಿಕೊಂಡು ಒಂದು ಹೈಬ್ರಿಡ್ ಮಾದರಿಯ ವರ್ಚುವಲ್ ತರಗತಿಯ ತಾಂತ್ರಿಕತೆಯನ್ನು ಸಿದ್ಧಪಡಿಸಿದೆ. ಈ ವರ್ಚುವಲ್ ತರಗತಿ ತಂತ್ರಾಂಶ ಮತ್ತು ವೀಡಿಯೋ ಪಠ್ಯವನ್ನು ಉಚಿತವಾಗಿ ಸರ್ಕಾರಿ ಶಾಲೆಗಳೊಂದಿಗೆ ಹಂಚಿಕೊಳ್ಳಲೂ ಅವರು ಸಿದ್ಧರಿದ್ದಾರೆ.
ಪುನರ್ ಕಲಿಕೆ, ಪುನರ್ ಮನನ, ಪ್ರತಿ ಪಾಠದ ನಂತರ ಪರೀಕ್ಷೆ ಈ ತರಗತಿಯ ಮುಖ್ಯ ಲಕ್ಷಣಗಳು. ಪ್ರತಿ ಮಗುವಿಗೂ ಯೂಸರ್ ಐಡಿ, ಪಾಸ್ ವರ್ಡ್ ಇದ್ದು, ಮಕ್ಕಳ ಶೈಕ್ಷಣಿಕ ಚಲನವಲನಗಳನ್ನು ಶಿಕ್ಷಕರು ತಿಳಿಯಬಹುದಾದ್ದರಿಂದ ಮಕ್ಕಳಿಗೆ ತಮ್ಮನ್ನು ಗಮನಿಸುವವರಿದ್ದಾರೆಂಬ ಎಚ್ಚರಿಕೆ ಇರುತ್ತದೆ. ಇಂಟರ್ ನೆಟ್ ಹೆಚ್ಚು ಬಳಕೆಯಾಗದು, ಮಗುವು ತನ್ನದೇ ಸಮಯದಲ್ಲಿ ಪಾಠ ಕೇಳಬಹುದು. ಇದರಿಂದ ಪೋಷಕರಿಗೆ ಕೂಡ ಹೊರೆಯಾಗದು.
ಪ್ರತಿಯೊಂದು ವಿಷಯದ ಪಾಠಗಳನ್ನು ಚಿತ್ರ, ಧ್ವನಿ, ವೀಡಿಯೋ ರೂಪದಲ್ಲಿ 15 ನಿಮಿಷಕ್ಕಿಂತ ಹೆಚ್ಚಿರದ ಹಾಗೆ ಸಿದ್ಧಪಡಿಸಲಾಗಿದೆ. ಪ್ರತಿ ಪಾಠ ಕಲಿತ ನಂತರ ಮಕ್ಕಳು ಮುಂದಿನ ಪಾಠವನ್ನು ಅಭ್ಯಾಸ ಮಾಡಲು ಹಿಂದಿನ ಪಾಠದ ಘಟಕ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ಪ್ರತಿಯೊಂದು ಪಾಠದ ನಂತರ ಟಿಪ್ಪಣಿಗಳು ಸಹ ಪಿಡಿಎಫ್ ಮೂಲಕ ನೀಡಲಾಗುತ್ತಿದೆ.
ಕೋವಿಡ್ ನಂತರ ಎಂದಿನಂತೆ ಶಾಲೆಗಳು ನಡೆಯುವಂತಾದಾಗ ಈಗಿನ ಪಾಠಗಳ ವೀಡಿಯೋಗಳನ್ನು ಬಳಕೆ ಮಾಡಿಕೊಳ್ಳಬಹುದು. ಮಕ್ಕಳು, ಶಿಕ್ಷಕರು ಮತ್ತು ಪೋಷಕರ ನಡುವಿನ ಕೊಂಡಿಯಂತೆ ಡಿಜಿಟಲ್ ಡೈರಿಯನ್ನು ಸಿದ್ಧಪಡಿಸುವ ಯೋಜನೆಯಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi