Nadipinayakanahalli, Sidlaghatta : ಭಾರತೀಯ ಪ್ರಸಿದ್ಧ ಭಾತಶಾಸ್ತ್ರಜ್ಞರಾದ ಚಂದ್ರಶೇಖರ್ ವೆಂಕಟ ರಾಮನ್ ಅವರ ವೈಜ್ಞಾನಿಕ ತತ್ವಗಳನ್ನು, ವಿಚಾರಗಳನ್ನು ಮತ್ತು ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಿ.ಧನುರೇಣುಕ ವಿದ್ಯಾರ್ಥಿಗಳಿಗೆ ತಿಳಿಸಿದರು.
ತಾಲ್ಲೂಕಿನ ನಡಿಪಿನಾಯನಹಳ್ಳಿಯ ನವೋದಯ ವಿದ್ಯಾಲಯ ವಸತಿ ಪ್ರೌಢ ಶಾಲೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ವಿಜ್ಞಾನ ತಂತ್ರಜ್ಞಾನ ಸಂವಹನ ಮಂಡಳಿ, ಸಹಯೋಗದೊಂದಿಗೆ ನಡೆದ ಡಾ. ಸಿ.ವಿ. ರಾಮನ್ ರವರ ವಕ್ರಿಭವನ ಪರಿಣಾಮದ ಆವಿಷ್ಕಾರದ ಸ್ಮರಣಾರ್ಥವಾಗಿ ಆಯೋಜಿಸಿದ್ದ “ರಾಷ್ಟ್ರೀಯ ವಿಜ್ಞಾನ ದಿನ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ವಿಜ್ಞಾನಿ ಸಿ.ವಿ.ರಾಮನ್ ರವರು ಫೆಬ್ರವರಿ 28, 1928 ರಂದು ಭೌತಶಾಸ್ತ್ರದ ಸಂಶೋಧನೆಯಲ್ಲಿ ಕ್ರಾಂತಿಕಾರಿ ವಿದ್ಯಮಾನವಾದ ರಾಮನ್ ಪರಿಣಾಮವನ್ನು ಕಂಡುಹಿಡಿದರು. ಆದ್ದರಿಂದ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರ ಜೀವನದಲ್ಲಿ ವಿಜ್ಞಾನವು ಮುಖ್ಯವಾಗಿದೆ. ಕೆಲವೊಮ್ಮೆ ನಮಗೆ ಅರಿವಿಲ್ಲದೆ ನಾವು ನಮ್ಮ ದೈನಂದಿನ ಜೀವನದಲ್ಲಿ ವಿಜ್ಞಾನ ಮತ್ತು ಅದರ ಅನ್ವಯಗಳನ್ನು ಬಳಸುತ್ತೇವೆ. ನಮ್ಮ ಜೀವನದಲ್ಲಿ ವಿಜ್ಞಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ನಮ್ಮ ಜೀವನವನ್ನು ಸರಳಗೊಳಿಸುವ ವಿಜ್ಞಾನಿಗಳ ಪ್ರಯತ್ನಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ಜಗತ್ತಿನ ದೈತ್ಯ ಪ್ರತಿಭೆಯಾಗಿ ಅಪಾರ ಸಾಧನೆಗೈದ ಭಾರತೀಯ ವಿಜ್ಞಾನಿಗಳಲ್ಲಿ ಅಗ್ರಗಣ್ಯ ವ್ಯಕ್ತಿ ಎಂದರೆ ಸರ್. ಸಿ.ವಿ.ರಾಮನ್. ಇವರು ಮಾಡಿರುವ ಸಾಧನೆಗಳಿಗೆ ನೋಬೆಲ್ ಪ್ರಶಸ್ತಿ, ಭಾರತರತ್ನ ಪ್ರಶಸ್ತಿ, ದೇಶ ವಿದೇಶಗಳ ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿಗಳು ಸೇರಿದಂತೆ ಅಸಂಖ್ಯಾತ ಗೌರವಗಳು, ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ತಮ್ಮ ಇಡೀ ಜೀವನವನ್ನು ಸಂಪೂರ್ಣವಾಗಿ ವಿಜ್ಞಾನಕ್ಕೆ ಅವರು ಸಮರ್ಪಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಮುನಿರಾಜ, ಶ್ರೀ ಲೋಕಮಾತಾ ಎಜುಕೇಷನಲ್ ಟ್ರಸ್ಟ್ ಸಂಸ್ಥಾಪಕ ಎನ್.ಆರ್. ಕೃಷ್ಣಮೂರ್ತಿ, ವಿಷಯ ಪರಿವೀಕ್ಷಕ ಟಿ.ಜಮೀರ್ ಪಾಷಾ, ಪ್ರಾಜೆಕ್ಟ್ ಅಸೋಸಿಯೇಟ್ ಎನ್.ಆರ್.ಡಿ.ಎಂ.ಎಸ್ ಯೋಜನಾ ಸಂಯೋಜಕಿ ಮಂಜುಳ.ಆರ್.ಚಂದುಗೋಳ್, ವಿಜ್ಞಾನ ಸಂಪನ್ಮೂಲ ಶಿಕ್ಷಕ ಎ.ಶ್ರೀನಿವಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೈನಾ ನಿಖ್ಖತ್ ಆರಾ ಹಾಜರಿದ್ದರು.