ನಗರದ ಹೊರವಲಯದ ನಲ್ಲಿಮರದಹಳ್ಳಿಯ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯವನ್ನು ವಿನೂತನವಾಗಿ ನಿರ್ಮಿಸಿದ್ದು, ಕಳೆದ ಮೂರು ದಿನಗಳಿಂದ ನೂತನ ದೇವಾಲಯದಲ್ಲಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ಸ್ಥಿರಬಿಂಬ, ಶಿವಲಿಂಗ, ನಾಗರಾಜ, ಧ್ವಜಸ್ಥಂಬ, ವಿಮಾನಗೋಪುರ ಕಲಶ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಮುಜರಾಯಿ ಇಲಾಖೆಗೆ ಸೇರುವ ಈ ದೇವಾಲಯವನ್ನು ಶ್ರೀಲಕ್ಷ್ಮೀನರಸಿಂಹಸ್ವಾಮಿ ಸೇವಾ ಟ್ರಸ್ಟ್ ಸದಸ್ಯರು ಒಗ್ಗೂಡಿ ಇದೀಗ ಹಳೆಯ ವಿಗ್ರಹವನ್ನು ಹಾಗೆಯೇ ಇದ್ದ ಸ್ಥಳದಲ್ಲಿಯೇ ಉಳಿಸಿಕೊಂಡು ಅತ್ಯಂತ ಸುಂದರವಾದ ದೇವಾಲಯವನ್ನು ನಿರ್ಮಿಸುವಲ್ಲಿ ಸಫಲರಾಗಿದ್ದಾರೆ.
ಶಿವಾರಪಟ್ಟಣದ ಶಿಲ್ಪಿಗಳು ಕೆತ್ತಿರುವ ಆರು ಅದಿ ಎತ್ತರದ ಶ್ರೀಲಕ್ಷ್ಮೀನರಸಿಂಹಸ್ವಾಮಿ ವಿಗ್ರಹ ಮತ್ತು 22 ಅಡಿ ಎತ್ತರದ ಧ್ವಜಸ್ಥಂಭ ದೇವಾಲಯದ ಮುಕುಟಪ್ರಾಯವಾಗಿದೆ. ದೇವಾಲಯದ ಮೇಲೆ ದಶಾವತಾರದ ಶಿಲ್ಪಗಳು, ಗೋಪುರದ ಬಳಿ ಆಂಜನೆಯ, ಗರುಡ ಮತ್ತು ಲಕ್ಷ್ಮೀನರಸಿಂಹಸ್ವಾಮಿ, ದೇವಸ್ಥಾನದ ಒಳಗೆ ಜಯ ವಿಜಯರ ಮೂರ್ತಿಗಳು, ಧ್ವಾರದಲ್ಲಿನ ಸಿಂಹಗಳು, ಕಂಬಗಳ ಮೇಲೆ ಮಂಗಳ ವಾದ್ಯಗಳನ್ನು ನುಡಿಸುವವರ ಶಿಲ್ಪಗಳಿಗೆ ಬಣ್ಣಗಳನ್ನು ಬಳಿಯುವ ಮೂಲಕ ಆಕರ್ಷಕಗೊಳಿಸಲಾಗಿದೆ. ದೇವಾಲಯದ ಪಕ್ಕದಲ್ಲಿದ್ದ ಪುರಾತನ ಅತ್ತಿ ಮರವನ್ನು ಸಂರಕ್ಷಿಸಿದ್ದಾರೆ.
ಕಲ್ಲಿನ ಮುಖ್ಯಧ್ವಾರದ ಚೌಕಟ್ಟು, ಗರ್ಭಗುಡಿ, ಧ್ವಜಸ್ಥಂಭವನ್ನು ಕಾರ್ಕಳದ ಶಿಲ್ಪಿಗಳು ಕೆತ್ತಿದ್ದರೆ, ಗೋಪುರದ ಶಿಲ್ಪಗಳನ್ನು ಸಿಮೆಂಟಿನಲ್ಲಿ ನಾಗಪಟ್ನಂ ಶಿಲ್ಪಿಗಳು ರೂಪಿಸಿರುವರು. ದಕ್ಷಿಣ ಕನ್ನಡ ಶೈಲಿಯ ದೇವಾಲಯದಂತೆ ಗರ್ಭಗುಡಿಗೆ ಒಂಬತ್ತು ಮೆಟ್ಟಿಲು ಹತ್ತಿ ಹೋಗುವಂತೆ ಕಟ್ಟಿಸಲಾಗಿದೆ.
ವಿವಿಧ ಹೋಮ, ಪೂಜೆಗಳನ್ನು ನಡೆಸಿ ಅನ್ನಸಂತರ್ಪಣೆಯನ್ನು ಸಹ ಶ್ರೀಲಕ್ಷ್ಮೀನರಸಿಂಹಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿತ್ತು.