ಶಿಡ್ಲಘಟ್ಟ ನಗರದ ನೆಹರೂ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಮುಖಂಡ ಎಚ್ಎಎಲ್ ದೇವರಾಜ್ ರಿಂದ ಆಯೋಜಿಸಲಾಗಿದ್ದ ವಿ.ಎಂ.(ವಿ.ಮುನಿಯಪ್ಪ) ಕಾಂಗ್ರೆಸ್ ಕಪ್ ಕ್ರಿಕೆಟ್, ವಾಲೀಬಾಲ್ ಹಾಗೂ ಕಬಡ್ಡಿ ಪಂದ್ಯಾವಳಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹ್ಮದ್ ಹ್ಯಾರಿಸ್ ನಳಪಾಡ್ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಯಾವುದೇ ಜನಪರ ಕಾಳಜಿಯಿಲ್ಲ ಎಂದು ಅವರು ಹೇಳಿದರು.
ಅಚ್ಚೇ ದಿನ್ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣೆ ಪೂರ್ವ ನೀಡಿದ ಯಾವುದೇ ಆಶ್ವಾಸನೆಗಳನ್ನು ಪೂರೈಸಿಲ್ಲ. ಬದಲಿಗೆ ದೇಶದ ಯುವಜನತೆಗೆ ಉದ್ಯೋಗ ನೀಡದೇ ನಿರುದ್ಯೋಗಿಗಳನ್ನಾಗಿ ಮಾಡಿದೆ ಎಂದರು.
ಮುಂಬರುವ ವಿದಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರವನ್ನು ಕಿತ್ತೊಗೆದು ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ತರುವ ನಿಟ್ಟಿನಲ್ಲಿ ಯುವಕರು ಒಗ್ಗಟ್ಟಾಗಬೇಕು ಎಂದರು.
ಯಾವುದೇ ಕ್ಷೇತ್ರದಲ್ಲಾಗಲೀ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೇಯೋ ಅವರ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ದುಡಿಯಬೇಕು, ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೊರೋನಾ ಹಾವಳಿಯಿಂದ ಕೋಟ್ಯಾಂತರ ಯುವಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿ ಮನೆಗಳಲ್ಲಿದ್ದಾರೆ. ಇಂತಹವರ ಬಗ್ಗೆ ಕನಿಷ್ಠ ಕಾಳಜಿಯಿಲ್ಲದ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ನೇತೃತ್ವದ ಸರ್ಕಾರ ತರಲು ಯುವಕರು ಶ್ರಮಿಸಬೇಕು ಎಂದರು.
ಕಾಂಗ್ರೆಸ್ ಮುಖಂಡ ಎಚ್ ಎ ಎಲ್ ದೇವರಾಜು ಮಾತನಾಡಿ, ತಾವು ಕ್ಷೇತ್ರದ ಎಂ ಎಲ್ ಎ ಟೆಕಟ್ ಆಕಾಂಕ್ಷಿ ಅಲ್ಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆಯ ಮೇರೆಗೆ ಕ್ಷೇತ್ರದಲ್ಲಿ ಪಕ್ಷ ಸಂಘಟಿಸುವ ಕೆಲಸವನ್ನು ಮಾಡುತ್ತಿದ್ದೇನೆ. ಆ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ ವಿ.ಮುನಿಯಪ್ಪನವರಿಗೆ ಕ್ರೀಡಾಕೂಟ ನಡೆಸುವ ಬಗ್ಗೆ ತಿಳಿಸಿ ಅವರು ಒಪ್ಪಿದ ನಂತರವೇ ವಿ.ಎಂ.ಕಾಂಗ್ರೆಸ್ ಕಪ್ ಬ್ಯಾನರ್ ನಡಿ ಕ್ರೀಡಾಕೂಟ ಆಯೋಜಿಸಿದ್ದು, ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜೇತರಾದ ತಂಡಗಳಿಗೆ ಮೊದಲನೇ ಬಹುಮಾನವಾಗಿ 2 ಲಕ್ಷ ನಗದು ಹಾಗು ಎರಡನೇ ಬಹುಮಾನವಾಗಿ ಒಂದು ಲಕ್ಷ ರೂ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಕೃಷ್ಣಮೂರ್ತಿ, ಕಾಂಗ್ರೆಸ್ ಯುವ ಮುಖಂಡರಾದ ಮಂಜುನಾಥ್, ಮುದಾಸಿರ್, ಮುತ್ತೂರು ವೆಂಕಟೇಶ್, ಚರಣ್ರೆಡ್ಡಿ, ಗಿರೀಶ್, ಅಮೀನ್, ಅಫ್ರೀದ್ ಹಾಜರಿದ್ದರು.