Nagamangala, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ನಾಗಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ತಮ್ಮಣ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದಿನ ಅಧ್ಯಕ್ಷ ಚನ್ನಕೃಷ್ಣ ಅವರು ರಾಜೀನಾಮೆ ಸಲ್ಲಿಸಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು.
ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ತಮ್ಮಣ್ಣ ಮಾತ್ರವೇ ನಾಮಪತ್ರ ಸಲ್ಲಿಸಿದ್ದು ಅವರ ಅವಿರೋಧ ಆಯ್ಕೆಯನ್ನು ಘೋಷಿಸಲಾಯಿತು.
ಚುನಾವಣಾಕಾರಿಯಾಗಿ ತಹಶೀಲ್ದಾರ್ ಬಿ.ಎನ್.ಸ್ವಾಮಿ, ಸಹಾಯಕ ಚುನಾವಣಾಕಾರಿಯಾಗಿ ತೋಟಗಾರಿಕೆ ಸಹಾಯಕ ನಿರ್ದೇಶಕ ರಮೇಶ್ ಕಾರ್ಯನಿರ್ವಹಿಸಿದರು.
ತಮ್ಮಣ್ಣ ಅವರ ಅವಿರೋಧ ಆಯ್ಕೆ ಘೋಷಣೆ ಆಗುತ್ತಿದ್ದಂತೆ ಅವರ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ತಮ್ಮಣ್ಣ ಪ್ರತಿಕ್ರಿಯಿಸಿ, ಎಲ್ಲ ಸದಸ್ಯರ ಸಹಮತದಿಂದ ನಾನು ಅಧ್ಯಕ್ಷನಾಗಿದ್ದೇನೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡುತ್ತೇನೆ ಎಂದರು.
ಕುಡಿಯುವ ನೀರು, ಬೀದಿ ದೀಪ, ಸ್ವಚ್ಚತೆಯ ನಿರ್ವಹಣೆಗೆ ಆಧ್ಯತೆ ನೀಡುವುದಾಗಿ ಭರವಸೆ ನೀಡಿದ ಅವರು, ಎಲ್ಲರ ಸಹಕಾರವನ್ನು ಕೋರಿದರು.