ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ವಿದ್ಯಾಲಯ ಪ್ರೌಢಶಾಲೆ ಮತ್ತು ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅವರಣದಲ್ಲಿ 2008-9 ನೇ ಸಾಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳು ಹಾಗೂ 2010-11 ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳ “ಜೇನು ಗೂಡು” ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಶಿಕ್ಷಕರಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಕೃಷ್ಣಮೂರ್ತಿ ಮಾತನಾಡಿ, ಕೊರೊನಾ ಕಾರಣದಿಂದ ಖಾಸಗಿ ಶಿಕ್ಷಕರು ಎರಡು ವರ್ಷಗಳಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸರ್ಕಾರ ಮತ್ತು ಯಾವುದೇ ಸಂಘಸಂಸ್ಥೆಗಳು ಖಾಸಗಿ ಶಿಕ್ಷಕರಿಗೆ ನೆರವಾಗದೆ ಇರುವ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳು ನೆರವಾಗುತ್ತಿರುವುದು ಅಭಿನಂದನೀಯ ಎಂದರು.
ಉಪನ್ಯಾಸಕ ಸುದರ್ಶನ್ ಮಾತನಾಡಿ, ದೇಶಕ್ಕೆ ಪ್ರಜ್ಞಾವಂತ ವಿದ್ಯಾರ್ಥಿಗಳನ್ನು ರೂಪಿಸುವ ಶಿಕ್ಷಕರು ಇಂದು ಶಿಕ್ಷಕ ವೃತ್ತಿಯನ್ನು ಬಿಟ್ಟು ಪರ್ಯಾಯ ವೃತ್ತಿಗಳನ್ನು ಆರಿಸಿಕೊಳ್ಳಬೇಕಾದ ಪರಿಸ್ಥಿತಿ ಒದಗಿದೆ. ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳು ಶಿಕ್ಷಕರ ನೋವನ್ನು ಅರಿತು ನೆರವಾಗುತ್ತಿರುವುದು ಸ್ವಾಗತಾರ್ಹ ಎಂದರು.
ಹಿರಿಯ ವಿದ್ಯಾರ್ಥಿ ಸುನಿಲ್ ಮಾತನಾಡಿ, ಕೊರೊನಾ ಮಹಾಮಾರಿ ಹೊಡೆತಕ್ಕೆ ಹಲವ್ರು ಕ್ಷೇತ್ರಗಳು ಆರ್ಥಿಕ ಹೊಡೆತವನ್ನು ಅನುಭವಿಸಿವೆ. ಖಾಸಗಿ ಶಿಕ್ಷಕರು ಯಾವುದೇ ಆದಾಯದ ಮೂಲವಿಲ್ಲದೆ ಕೌಟುಂಬಿಕ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ಈ ವಿಷಮ ಸಂದರ್ಭದಲ್ಲಿ ನಮ್ಮ ಕೈಲಾದ ಅಳಿಲು ಸೇವೆಯನ್ನು ಮಾಡುತ್ತಿದ್ದೇವೆ ಎಂದರು.
ಹಿರಿಯ ವಿದ್ಯಾರ್ಥಿ ವೈ.ಪಿ.ಮಾಲಾ ವಿಶ್ವ ಪರಿಸರ ದಿನದ ಅಂಗವಾಗಿ ಪ್ರತಿಯೊಬ್ಬ ಶಿಕ್ಷಕರಿಗೂ ಒಂದೊಂದು ಗಿಡವನ್ನು ಕೊಟ್ಟರು.
ಶಿಕ್ಷಕರಾದ ಎಸ್.ಮನ್ಸೂರ್ ಪಾಷ, ಎಂ.ಮುನಿಯಪ್ಪ, ಸುಜಾತ, ಶಿಲ್ಪ, ಸುಪ್ರಿಯ್, ಮೋಹನ್, ಶಿವಪ್ಪ, ನಾಗೇಶ್, ಹಿರಿಯ ವಿದ್ಯಾರ್ಥಿಗಳಾದ ಪ್ರವೀಣ್ ಕುಮಾರ್, ಸುನಿಲ್, ವಿನಯ್ ಕುಮಾರ್, ಮುಖೇಶ, ಭರತ್, ಕಿರಣ್ ಕುಮಾರ್, ಶ್ವೇತ, ಮಾಲಾ ಹಾಜರಿದ್ದರು.