Nadipinayakanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ಶಾಲೆಯಲ್ಲಿ (Navodaya School) ಮಕ್ಕಳಿಗೆ ಸಂಸತ್ ಚುನಾವಣೆಯ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಮಕ್ಕಳ ಶಾಲಾ ಸಂಸತ್ ಚುನಾವಣೆ (Student Council Election) ನಡೆಸಿ ಮಕ್ಕಳಿಗೆ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಸಂದರ್ಭದಲ್ಲಿ ನಡಿಪಿನಾಯಕನಹಳ್ಳಿಯ ನವೋದಯ ಶಾಲೆಯ ಮುಖ್ಯಶಿಕ್ಷಕ ಸತ್ಯನಾರಾಯಣ ಅವರು ಮಾತನಾಡಿದರು.
ರಾಷ್ಟ್ರಪತಿ, ಪ್ರಧಾನ ಮಂತ್ರಿ ನಂತರ ಸಂಪುಟದ ಮಂತ್ರಿಗಳ ಆಯ್ಕೆ ಹೇಗಿರುತ್ತದೆ, ಅವರ ಆಡಳಿತದ ಕಾರ್ಯವೈಖರಿ ರೂಪುರೇಷೆ ಹಾಗೂ ಅಧಿಕಾರ ನಡೆಸುವ ಬಗ್ಗೆ ಮಕ್ಕಳಿಗೆ ತಿಳಿಸುತ್ತಿದ್ದೇವೆ. ಶಾಲಾ ಸಂಸತ್ ಚುನಾವಣೆ ಚುನಾವಣಾ ಆಯೋಗದ ನೀತಿ ನಿಯಮಗಳನ್ವಯ ನಡೆಯುತ್ತಿದ್ದು ಬಹಳ ವಿಶೇಷವಾಗಿದೆ. ಚುನಾವಣಾ ದಿನಾಂಕ ಘೋಷಣೆ, ನಾಮಪತ್ರ ಸಲ್ಲಿಕೆಗೆ ಗಡವು, ಹಿಂಪಡೆಯುವಿಕೆಗೆ ಅವಕಾಶ, ಚುನಾವಣಾ ಚಿಹ್ನೆ ನೀಡುವುದು, ಮತ ಪ್ರಚಾರಕ್ಕೆ ಅವಕಾಶ, ಮತದಾನ, ಫಲಿತಾಂಶ ಘೋಷಣೆ ಹೀಗೆ ನಿಯಮಬದ್ಧವಾಗಿ ಚುನಾವಣೆ ನಡೆಸಲಾಗುತ್ತದೆ. ಬಳಿಕ ಮಂತ್ರಿಮಂಡಲ ರಚನೆ ಹಾಗೂ ಖಾತೆ ಹಂಚಿಕೆ, ಜವಾಬ್ದಾರಿ ಹಂಚಿಕೆ ನಡೆಯುತ್ತದೆ.
ಶಾಲೆಗಳಲ್ಲಿ ನಡೆದ ಚುನಾವಣೆಗಳ ಅನ್ವಯ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಖಾತೆಗಳ ಹಂಚಿಕೆ ಮಾಡಿ ಆಯಾ ವರ್ಷದ ಶಾಲಾ ಜವಾಬ್ದಾರಿ ವಹಿಸಲಾಗುತ್ತದೆ. ಪ್ರಧಾನ ಮಂತ್ರಿ, ಶಿಕ್ಷ ಣ ಮಂತ್ರಿ, ಸ್ವಚ್ಛತಾ ಮಂತ್ರಿ, ಗ್ರಂಥಾಲಯ ಪಾಲನೆ, ರಕ್ಷಣಾ ಮಂತ್ರಿ, ಆಹಾರ ಮಂತ್ರಿ ಹೀಗೆ ನಾನಾ ಖಾತೆಗಳನ್ನು ನೀಡಿ ಮಕ್ಕಳಿಗೆ ಜವಾಬ್ದಾರಿ ನೀಡುವುದರಿಂದ ವರ್ಷವಿಡೀ ಶಾಲೆಯ ನಿರ್ವಹಣೆ ಮಾಡಲು ಶಿಕ್ಷಕರಿಗೆ ಸುಲಭವೆನಿಸುತ್ತದೆ. ಶಿಕ್ಷಣ ಇಲಾಖೆಯ ಈ ತಂತ್ರದಿಂದ ಮಕ್ಕಳಿಗೆ ದೇಶದ ರಾಜಕೀಯ ವ್ಯವಸ್ಥೆಯ ಬಗ್ಗೆ ಪ್ರಾಯೋಗಿಕ ಅನುಭವ ಸಿಗಲಿದೆ ಎಂದರು.
ಒಟ್ಟು ಹತ್ತು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 18 ಅಭ್ಯರ್ಥಿಗಳು ಭಾಗವಹಿಸಿದ್ದರು. 325 ವಿದ್ಯಾರ್ಥಿಗಳು ಮತ ಚಲಾಯಿಸಿದರು.
ಮುಖ್ಯ ಚುನಾವಣಾಧಿಕಾರಿ ಉಮಾಶಂಕರ್, ಮುನಿರಾಜು, ಶ್ರೀಧರಮೂರ್ತಿ, ಆದಿನಾರಾಯಣ, ಸುದರ್ಶನ್ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಇ.ಎಲ್.ಸಿ ಮುಖ್ಯಸ್ಥರಾದ ಮನ್ಸೂರ್ ಪಾಷ ಹಾಗೂ ಶಿವಪ್ಪ ಗೆದ್ದ ಅಭ್ಯರ್ಥಿಗಳಿಗೆ ಪ್ರಮುಖ ಖಾತೆಗಳನ್ನು ಹಂಚಿಕೆ ಮಾಡಿ ಶುಭ ಹಾರೈಸಿದರು.
ಎಸ್.ಎನ್.ಭರತ್ ಕುಮಾರ್(ಪ್ರಧಾನಮಂತ್ರಿ), ಕೆ.ಬಿ.ವಂದನ್ ಗೌಡ(ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ), ಎಸ್.ಎಸ್.ಕಾವ್ಯ(ಆರೋಗ್ಯ ಮಂತ್ರಿ), ಡಿ.ಎನ್.ಗೀತಾ(ಕ್ರೀಡಾ ಮಂತ್ರಿ), ಜೆ.ಕೆ.ಪ್ರಕೃತಿ(ಸಾಂಸ್ಕೃತಿಕ ಮಂತ್ರಿ), ಅನಿಲ್ ಕುಮಾರ್ (ಪರಿಸರ ಮಂತ್ರಿ), ಬಿ.ಎನ್.ಸುಚಿತ್ರ(ಆಹಾರ ಮಂತ್ರಿ), ಮದನ್(ಸ್ವಚ್ಛತಾ ಮಂತ್ರಿ), ಬಿ.ವಿ.ಚಂದನ(ನೀರಾವರಿ ಮಂತ್ರಿ), ಎನ್.ವಿ.ಬಿಂದು(ವಾರ್ತಾಪ್ರಸಾರ, ಗ್ರಂಥಾಲಯ ಮಂತ್ರಿ) ಆಗಿ ಪದಗ್ರಹಣ ಸ್ವೀಕರಿಸಿದರು.