Nadipinayakanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ನಾಗಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಪಿನಾಯಕನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶುಕ್ರವಾರ ತಾಲ್ಲೂಕು ಮಟ್ಟದ ಜಲ ಸಂಜೀವಿನಿ ಸಂವಾದ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ರೈತ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ನರೇಗಾ ಯೋಜನೆಯಡಿ ಅನುಷ್ಠಾನಗೊಂಡಿರುವ ಜಲ ಸಂಜೀವಿನಿ ವಿನೂತನ ಕಾರ್ಯಕ್ರಮಗಳಾದ ವೈಜ್ಞಾನಿಕ ಯೋಜನೆ, ಗೋಮಾಳ ಅಭಿವೃದ್ಧಿ, ವಿಪತ್ತು ನಿರ್ವಹಣೆ, ವನ್ಯಜೀವಿ ಸಂರಕ್ಷಣೆ ಹಾಗೂ ಸುಸ್ಥಿರ ಜೀವನೋಪಾಯದ ಕುರಿತಾಗಿ ಮಾಹಿತಿಯನ್ನು ತಿಳಿಸಲು ನಡಿಪಿನಾಯಕನಹಳ್ಳಿ ಗ್ರಾಮದ ಅಮೃತ ಸರೋವರ ಕೆರೆ ಅಂಗಳದಲ್ಲಿ ರೈತರ ಜೊತೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೈತರಿಗೆ ಗ್ರಾಮದ ಅಭಿವೃದ್ಧಿಯ ಬಗ್ಗೆ ವಿವರಿಸಲಾಯಿತು. ನಂತರ ಅಮೃತ ಸರೋವರ ಕೆರೆ ಅಂಗಳದಲ್ಲಿ ರೈತರ ಜೊತೆ ಉಪಹಾರ ಸೇವಿಸುವ ಮೂಲಕ ವಿನೂತನವಾಗಿ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ತಾಲ್ಲೂಕು ಮಟ್ಟದ ಜಲ ಸಂಜೀವಿನಿ ಸಂವಾದ ಕಾರ್ಯಕ್ರಮವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೈನಾ ನಿಖತ್ ಆರ, ರೈತ ಬಾಂಧವರು, ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.