Nadipinayakanahalli, Sidlaghatta : ಮಕ್ಕಳಲ್ಲಿ ಚಿಕ್ಕಂದಿನಲ್ಲಿಯೇ ವೈಚಾರಿಕತೆ, ಚಿಂತನಾಶೀಲತೆ, ಪ್ರಶ್ನಿಸುವ ಗುಣ, ವೈಜ್ಞಾನಿಕ ಮನೋಭಾವನೆಯು ಬೆಳೆಸಬೇಕು. ವಿಜ್ಞಾನವನ್ನು ಚೆನ್ನಾಗಿ ಅರಿತಾಗ ಸಮಾಜದಲ್ಲಿನ ಅನೇಕ ಮೌಡ್ಯಾಚರಣೆಗಳನ್ನು ತೊಡೆದುಹಾಕಬಹುದು. ಯುವವಿಜ್ಞಾನಿಗಳ ಅಗತ್ಯ ಇಂದು ರಾಷ್ಟ್ರಕ್ಕೆ ಅಗತ್ಯವಿದೆ ಎಂದು ಶಿಕ್ಷಣ ಸಂಯೋಜಕ ಯು.ವೈ.ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ನಡಿಪಿನಾಯಕನಹಳ್ಳಿ ನವೋದಯ ವಸತಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಂಗಳೂರಿನ ವಿಶ್ವೇಶ್ವರಯ್ಯ ವಿಜ್ಞಾನ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯಗಳ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ವಿಜ್ಞಾನ ವಸ್ತುಪ್ರದರ್ಶನ, ವಿಜ್ಞಾನ ವಿಚಾರಗೋಷ್ಟಿ, ವಿಜ್ಞಾನ ನಾಟಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ಭಾರತೀಯ ಋಷಿಗಳು ವಿಜ್ಞಾನಕ್ಕೆ ನೀಡಿದ ಕೊಡುಗೆ ಅಪಾರವಾದುದು. ನಮ್ಮ ದೇಶದಲ್ಲಿ ಬಹು ಹಿಂದೆಯೇ ಸಾಕಷ್ಟು ವೈಜ್ಞಾನಿಕ ಸಂಶೋಧನೆ, ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಸಾಧನೆಯಾಗಿದ್ದಿತು. ಭಾರತೀಯ ವಿಜ್ಞಾನಿಗಳು ಪ್ರಪಂಚದಲ್ಲಿಯೇ ಉತ್ತಮ ಸಾಧನೆ ಮಾಡಿದ್ದು ಇತರೆ ದೇಶದ ವಿಜ್ಞಾನಿಗಳಿಗೆ ಮಾದರಿಯಾಗಿದ್ದಾರೆ ಎಂದರು.
ನವೋದಯ ಪ್ರೌಢಶಾಲೆಯ ಮುಖ್ಯಶಿಕ್ಷಕ ಎನ್.ಕೆ.ಸತ್ಯನಾರಾಯಣ್ ಮಾತನಾಡಿ, ವೈಜ್ಞಾನಿಕ ಅಂಶಗಳನ್ನು ಅರಿತು ಬದುಕಿನ ಪ್ರತಿ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕು. ಕಲಿಕೆಯೊಂದಿಗೆ ವಿಜ್ಞಾನಪ್ರಯೋಗಗಳನ್ನು ಮಾಡುವ ಮೂಲಕ ಅನ್ವೇಷಣಾ ಗುಣವನ್ನು ವೃದ್ಧಿಸಿಕೊಳ್ಳಬೇಕು. ಕಲಿತ ವಿಜ್ಞಾನದ ಅನುಭವಗಳ ಮೂಲಕ ಹೊಸತನ್ನು ಅನ್ವೇಶಿಸಲು ಬಳಸಿಕೊಳ್ಳಬೇಕು ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಇಂದು ಪೋಷಕರು ಎಂಜಿನಿಯರಿಂಗ್. ವೈದ್ಯಕೀಯ ವಿಜ್ಞಾನದೆಡೆಗೆ ತಮ್ಮ ಮಗು ಸಾಗಬೇಕೆಂಬ ಸಾಮಾನ್ಯ ಭಾವನೆ ಹೊಂದಿದ್ದು, ಮೂಲವಿಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡಬೇಕಾದ ಅಗತ್ಯವಿದೆ. ವಿಜ್ಞಾನವೆಂಬುದು ಎರಡು ಅಲುಗಿನ ಕತ್ತಿಯಾಗಿದ್ದು, ಅದನ್ನು ದೇಶದ ಅಭಿವೃದ್ದಿಗೂ, ಪ್ರಪಂಚ ವಿನಾಶಕ್ಕೂ ಬಳಸಬಹುದು. ಮೌಢ್ಯಗಳ ಆಚರಣೆ, ಮೂಢನಂಬಿಕೆಗಳ ಅಳವಡಿಕೆಯಿಂದ ಸಾಕಷ್ಟು ಮಂದಿ ಮೋಸಹೋಗುತ್ತಿದ್ದಾರೆ. ಜ್ಯೋತಿಷ್ಯ, ಖಗೋಳದಂತಹ ವಿಷಯಗಳನ್ನು ವೈಜ್ಞಾನಿಕವಾಗಿ ಅರಿಯಬೇಕು ಎಂದರು.
ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವೈಯಕ್ತಿಕ ಮತ್ತು ಗುಂಪು ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಗಣಕಯಂತ್ರ ವಿಜ್ಞಾನ, ಭೂಮಿ ಮತ್ತು ಬಾಹ್ಯಾಕಾಶ, ಪರಿಸರ ವಿಜ್ಞಾನ, ಎಂಜಿನಿಯರಿಂಗ್, ಜೈವಿಕವಿಜ್ಞಾನ, ಜೀವರಾಸಾಯನಶಾಸ್ತ್ರ ವಿಷಯಗಳಲ್ಲಿ ಹಲವು ಮಾದರಿಗಳು ಪ್ರದರ್ಶನಗೊಂಡವು. ಕೃತಕ ಬುದ್ಧಿಮತ್ತೆ-ಸಂಭವನೀಯತೆ ಮತ್ತುಕಾಳಜಿಗಳು ಕುರಿತ ವಿಚಾರಗೋಷ್ಟಿ ಮತ್ತು ಗ್ಲೋಬಲ್ ವಾಟರ್ ಕ್ರೈಸಿಸ್, ಪ್ರಕೃತಿವಿಕೋಪಗಳ ನಿರ್ವಹಣೆ, ಆರೋಗ್ಯ ಮತ್ತು ನೈರ್ಮಲ್ಯ, ಹವಾಮಾನ ವೈಪರೀತ್ಯ ವಿಷಯಗಳಲ್ಲಿ ವಿಜ್ಞಾನ ನಾಟಕ ಪ್ರದರ್ಶನ ನಡೆಯಿತು. ವಿಜೇತರಾದವರಿಗೆ ಪ್ರಶಸ್ತಿಪತ್ರ, ಬಹುಮಾನಗಳನ್ನು ವಿತರಿಸಲಾಯಿತು.
ಶಿಕ್ಷಕರಾದ ಜಿ.ಲಕ್ಷ್ಮಿಪ್ರಸಾದ್, ಸಿ.ಪ್ರಶಾಂತಕುಮಾರ್, ವಿಶ್ವನಾಥ್, ಬೃಂದಾ, ಸವಿತಾ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಶಿಕ್ಷಕರಾದ ದ್ಯಾವಪ್ಪ, ಮನ್ಸೂರ್‌ಪಾಶಾ, ಉಮಾಶಂಕರ್, ಚೌಡರೆಡ್ಡಿ, ಮುನಿರಾಜು, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ಹಾಜರಿದ್ದರು.