ಶಿಡ್ಲಘಟ್ಟ ನಗರದ ವ್ಯಾಪ್ತಿಯಲ್ಲಿ ಸುಮಾರು 3000 ಕ್ಕೂ ಅಧಿಕ ಅಂಗಡಿಗಳಿವೆ. ನಗರಸಭೆಯಿಂದ ಪ್ರತಿಯೊಬ್ಬರೂ ಶುಲ್ಕ ಪಾವತಿಸಿ ವ್ಯಾಪಾರಿ ಪರವಾನಗಿ ಪಡೆದುಕೊಳ್ಳಬೇಕೆಂದು ತಿಳಿಸಿದ್ದೇವೆ. ವ್ಯಾಪಾರಸ್ಥರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಶ್ರೀಕಾಂತ್ ತಿಳಿಸಿದರು.
ನಗರದ ಮುಖ್ಯ ರಸ್ತೆಯಲ್ಲಿನ ವಿವಿಧ ಅಂಗಡಿಗಳಿಗೆ ತೆರಳಿ ಅಂಗಡಿ ಮಾಲೀಕರಿಗೆ ನಗರಸಭೆಯಿಂದ ಪರವಾನಗಿ ಪಡೆದುಕೊಳ್ಳಲು ತಿಳಿಸಿ ಅವರು ಮಾತನಾಡಿದರು.
ವ್ಯಾಪಾರಸ್ಥರು ಉದ್ದಿಮೆ ಪರವಾನಿಗೆ ಪಡೆದಿಲ್ಲ. ಕೆಲವರು ಪಡೆದಿದ್ದರೂ ಅದನ್ನು ನವೀಕರಿಸಿಲ್ಲ. ಈ ಬಗ್ಗೆ ದಿನಸಿ ವರ್ತಕರ ಸಂಘದವರಿಗೂ ತಿಳಿಸಲಾಗಿದೆ. ಸಂಘದವರು ಇದರ ಕುರಿತಾಗಿ ಸಭೆ ಕರೆದು ಸಭೆಯಲ್ಲಿ ಎಲ್ಲರಿಗೂ ವಿಷಯ ತಿಳಿಸಿ, ಪರವಾನಗಿ ಪಡೆಯಲಾಗುವುದು ಎಂದು ಒಪ್ಪಿಗೆ ನೀಡಿದ್ದಾರೆ. ನಗರದ ಎಲ್ಲಾ ವ್ಯಾಪಾರಸ್ಥರು ನಿಗದಿಪಡಿಸಿರುವ ಶುಲ್ಕ ಪಾವತಿಸಿ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯಬೇಕು, ಪಡೆಯದೇ ಇದ್ದರೆ ಕರ್ನಾಟಕ ಪುರಸಭೆ ಕಾಯ್ದೆ 1964 ರ ನಿಯಮ ಅನ್ವಯ ಅಂಗಡಿಗಳನ್ನು ಮುಚ್ಚಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಿನಸಿ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್, ಕಾರ್ಯದರ್ಶಿ ಮಹೇಶ್ ಹಾಗೂ ನಗರಸಭೆ ಸಿಬ್ಬಂದಿ ಹಾಜರಿದ್ದರು.