Sidlaghatta : ಸೋಮವಾರ ಬೆಳಗ್ಗೆಯಿಂದಲೇ ನಗರದಲ್ಲಿ ಸ್ವಚ್ಛತೆ ಆಂದೋಲನ ಪ್ರಾರಂಭವಾಗಬೇಕು. ನಗರಸಭೆ ಸಿಬ್ಬಂದಿ, ವಾಹನ, ಜೆಸಿಬಿ ಏನೇ ಕೊರತೆಯಿದ್ದರೂ ನಾನು ಹೊರಗಡೆಯಿಂದ ತರಿಸುತ್ತೇನೆ. ಒಂದು ವಾರದ ಒಳಗೆ ನಗರ ಸ್ವಚ್ಛಗೊಳ್ಳಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರಸಭೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಾರ್ವಜನಿಕರ ಸಮಸ್ಯೆಗಳ ಹಾಗೂ ಕುಂದುಕೊರತೆಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಗರಸಭೆ ಅಧಿಕಾರಿಗಳು ಆಯಾ ವಾರ್ಡುಗಳ ಸದಸ್ಯರ ಸಹಕಾರ ಪಡೆದು ಮತ್ತು ಜೊತೆಗೂಡಿ, ಸ್ವಚ್ಛತೆಯನ್ನು ಪ್ರಾರಂಭಿಸಬೇಕು. ನಾನೂ ನಿಮ್ಮೊಂದಿಗೆ ಇರುತೇನೆ. ಇದನ್ನು ತಡಮಾಡುವಂತಿಲ್ಲ ಎಂದರು.
ಜನಸಾಮಾನ್ಯರು ನಗರಸಭೆ ಸದಸ್ಯರಿಗೆ ಮತ ನೀಡಿ ಗೆಲ್ಲಿಸಿರುವುದು, ತಮ್ಮ ವಾರ್ಡುಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಸರಿಪಡಿಸಲಿ ಎಂದು. ನಗರಸಭೆ ಹಲವಾರು ಸಮಸ್ಯೆಗಳಿಂದ ತುಂಬಿರುವುದು ನನ್ನ ಗಮನದಲ್ಲಿದೆ. ಎಲ್ಲವನ್ನೂ ಒಂದೇ ಬಾರಿಗೆ ಬಗೆ ಹರಿಸಲು ಸಾಧ್ಯವಿಲ್ಲ. ಹಂತಹಂತವಾಗಿ ಸರಿಪಡಿಸಬೇಕು. ಮೊದಲು ನಗರವನ್ನು ಸ್ವಚ್ಛಗೊಳಿಸೋಣ, ನಂತರ ಕುಡಿಯುವ ನೀರು, ಒಳಚರಂಡಿ ಹೀಗೆ ಒಂದೊಂದಾಗಿ ಸರಿಪಡಿಸುತ್ತಾ ಹೋಗೋಣ. ಪಕ್ಷ, ರಾಜಕೀಯವನ್ನು ಬದಿಗೆ ಸರಿಸಿ ಕೆಲಸ ಮಾಡಬೇಕಿದೆ ಎಂದರು.
ಮುಂದಿನವಾರ ಎಲ್ಲಾ ನಗರಸಭೆ ಸದಸ್ಯರುಗಳನ್ನು ಕರೆದು ಸಭೆ ಮಾಡಲು ತಿಳಿಸಿದ್ದೇನೆ. ಪ್ರತಿಯೊಬ್ಬ ನಗರಸಭೆ ಸದಸ್ಯರೂ ತಮ್ಮ ವಾರ್ಡುಗಳಲ್ಲಿನ ಜನಸಾಮಾನ್ಯರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪಟ್ಟಿ ಮಾಡಿ ತನ್ನಿ. ಎಲ್ಲರೂ ಕೂತು ಚರ್ಚಿಸಿ, ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡೋಣ ಎಂದರು.
ಇವತ್ತು ಜನಸಾಮಾನ್ಯರು ನಗರಸಭೆ ಅಂದರೆ ಬೇಸರ ವ್ಯಕ್ತಪಡಿಸುವಂತಾಗಿದೆ. ನಗರಸಭೆಯಲ್ಲಿ ಸದಸ್ಯರಾದವರು ಅಶ್ಲೀಲ ಪದಗಳನ್ನು ಮಾತನಾಡಬಾರದು. ಚರ್ಚೆಗಳು ಆರೋಗ್ಯಪೂರ್ಣವಾಗಿರಲಿ, ಅನವಶ್ಯಕ ಮಾತುಗಳಾಗಲೀ, ರಾಜಕೀಯವಾಗಲೀ ನಗರಸಭೆ ಹೊರಗೆ ಇರಲಿ, ಒಳಗೆ ಬೇಡ. ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಹಿಂದೆ ಏನಾಯಿತು ಎಂಬುದನ್ನು ಮರೆತು, ಇನ್ನು ಮುಂದೆ ನಗರಸಭೆ ಹೇಗೆ ಅಭಿವೃದ್ಧಿಯೆಡೆಗೆ ಮುನ್ನಡೆಯಬೇಕು ಎಂಬುದು ನಮ್ಮ ಮುಂದಿರುವ ಸವಾಲು ಎಂದು ಹೇಳಿದರು.
ನಾನು ಶಾಸಕನಾಗಿರೋದು ಜನಕ್ಕೆ ಒಳ್ಳೆಯದು ಮಾಡಲೆಂದು. ದ್ವೇಷದ ರಾಜಕಾರಣ ನನ್ನದಲ್ಲ. ಸುಮ್ಮನೆ ಜನರಿಗೆ ಆಶ್ವಾಸನೆ, ಭರವಸೆ ನೀಡುವ ಉದ್ದೇಶ ನನ್ನದಲ್ಲ. ಕ್ಷೇತ್ರದಲ್ಲಿ ಜನಸಾಮಾನ್ಯರು ನೆಮ್ಮದಿಯಿಂದ ಜೀವನ ಮಾಡಬೇಕು. ಸರ್ಕಾರದಿಂದ ಬರುವ ಸವಲತ್ತುಗಳು, ಯೋಜನೆಗಳು ನೇರವಾಗಿ ಜನರಿಗೆ ಸಿಗಬೇಕು. ಸರ್ಕಾರದಿಂದ ಬರುವ ಅನುದಾನದಿಂದ ಕ್ಷೇತ್ರ ಅಭಿವೃದ್ಧಿಯಾಗಬೇಕು ಎಂಬುದು ನನ್ನ ಉದ್ದೇಶ ಎಂದರು.
ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್, ಪೌರಾಯುಕ್ತ ಆರ್.ಶ್ರೀಕಾಂತ್ ಸೇರಿದಂತೆ ನಗರಸಭೆ ಸದಸ್ಯರು, ಅಧಿಕಾರಿ, ಸಿಬ್ಬಂದಿ ಹಾಗೂ ನಾಗರಿಕರು ಭಾಗವಹಿಸಿದ್ದರು.