Sidlaghatta : 2021-22 ನೇ ಸಾಲಿನ 15 ನೇ ಹಣಕಾಸು ಆಯೋಗದ ಅನುದಾನದ ಅಡಿಯಲ್ಲಿ 40 ಲಕ್ಷ ರೂ ವೆಚ್ಚದಲ್ಲಿ ಸಕ್ಕಿಂಗ್ ಯಂತ್ರವನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸುತ್ತಿದ್ದೇವೆ ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್ ತಿಳಿಸಿದರು.
ನಗರಸಭೆ ವತಿಯಿಂದ ಗುರುವಾರ ನೂತನ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಶೌಚಾಲಯದ ತ್ಯಾಜ್ಯ ವಿಲೇವಾರಿಗಾಗಿ ಇರುವ ಪರ್ಯಾಯ ವ್ಯವಸ್ಥೆಯಾದ ಸಕ್ಕಿಂಗ್ ಯಂತ್ರದ ಸೌಲಭ್ಯವನ್ನು ನಗರದ ಎಲ್ಲ ವಾರ್ಡುಗಳಿಗೂ ಸಮರ್ಪಕವಾಗಿ ಸಿಗಬೇಕು. ಈ ಹಿಂದೆ ಇದ್ದ ಹಳೆಯ ಯಂತ್ರವು ಆಗಾಗ್ಗೆ ದುರಸ್ಥಿ ಮಾಡಬೇಕಾಗಿತ್ತು. ಅದಕ್ಕೆಂದು ಇದೀಗ ಹೊಸ ಸಕ್ಕಿಂಗ್ ಯಂತ್ರ ಖರೀದಿಸಲಾಗಿದೆ ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಶ್ರೀಕಾಂತ್ ಮಾತನಾಡಿ, ಮಲವನ್ನು ಹೊರುವ ನಾಗರಿಕ ಸಮಾಜದ ಹೀನ ಪದ್ಧತಿಯನ್ನು ಸರ್ಕಾರ ನಿಷೇಧಿಸಿ ಹಲವಾರು ವರ್ಷಗಳೇ ಉರುಳಿವೆ. ಈ ನಿಟ್ಟಿನಲ್ಲಿ ನಮ್ಮ ನಗರಸಭೆ ಈಗಾಗಲೇ ಒಂದು ಯಂತ್ರವನ್ನು ಖರೀದಿಸಿತ್ತು. ಅದು ಹಳೆಯದಾಗಿರುವುದರಿಂದ ಇದೀಗ ನಾಲ್ಕು ಸಾವಿರ ಲೀಟರ್ ಸಾಮರ್ಥ್ಯದ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರವನ್ನು ಖರೀದಿಸಿದ್ದು, ಸಾರ್ವಜನಿಕರ ಸೇವೆಗೆ ಮೀಸಲಿರಿಸಿದ್ದೇವೆ ಎಂದರು.
ನಗರಸಭೆಯ ಸದಸ್ಯರಾದ ಜಬೀವುಲ್ಲಾ, ಸುರೇಶ್, ವೆಂಕಟಸ್ವಾಮಿ, ನಗರಸಭೆ ಆರೋಗ್ಯ ನಿರೀಕ್ಷಕ ರಾಜೇಶ್, ಮುರಳಿ, ವ್ಯವಸ್ಥಾಪಕ ವೆಂಕಟೇಶ್ ಹಾಜರಿದ್ದರು.