Sidlaghatta : ಕೋಲಾರದಲ್ಲಿ ನಡೆದ ಜನತಾ ದರ್ಶನದಲ್ಲಿ ಕೋಲಾರದ ಸಂಸತ್ ಸದಸ್ಯ ಎಸ್.ಮುನಿಸ್ವಾಮಿ ಅವರು ಸಾರ್ವಜನಿಕರ ಪರ ಅರ್ಜಿ ಸಲ್ಲಿಸಲು ಹೋದಾಗ ಅಲ್ಲಿ ಅವರನ್ನು ನಡೆಸಿಕೊಂಡ ರೀತಿ ಖಂಡನೀಯ ಎಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಆರೋಪಿಸಿದರು.
ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಶಿಡ್ಲಘಟ್ಟ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಸರ್ಕಾರದಿಂದ ಕೋಲಾರ ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜನತಾ ದರ್ಶನದಲ್ಲಿ ಸಾರ್ವಜನಿಕರ ಪರವಾಗಿ ಅರ್ಜಿ ಸಲ್ಲಿಸಲು ಸಂಸದ ಮುನಿಸ್ವಾಮಿ ಅವರು ತೆರಳಿದಾಗ ಅವರನ್ನು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಅವರು ಏಕವಚನ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ಧಾರೆ.
ಸಚಿವ ಬೈರತಿ ಸುರೇಶ್ ಅವರ ಉಪಸ್ಥಿತಿಯಲ್ಲಿ ಜನಪ್ರತಿನಿಯಾದ ಸಂಸದ ಮುನಿಸ್ವಾಮಿ ಅವರನ್ನು ಪೊಲೀಸ್ ಬಲ ಉಪಯೋಗಿಸಿ ಸಭೆಯಿಂದ ಹೊರಗೆ ತಳ್ಳಿಕೊಂಡು ಹೋಗಿದ್ದು ಅಕ್ಷಮ್ಯ ಅಪರಾಧ ಅದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸದರಿಗೆ ಮಾಡಿದ ಅಪಮಾನ ಎಂದು ದೂರಿದರು.
ಜನತಾ ದರ್ಶನವು ಸರಕಾರದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮ, ಅಲ್ಲಿ ಎಲ್ಲರಿಗೂ ಮುಕ್ತವಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಇದ್ದರೂ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಎಂಬಂತೆ ಬಿಂಬಿಸಿಕೊಂಡಿದ್ದಾರಲ್ಲದೆ ಪೊಲೀಸ್ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಸರಿಯಲ್ಲ ಎಂದು ಆಪಾದಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿ ಒಬ್ಬ ಸಂಸದರಿಗೆ ಪರಿಸ್ಥಿತಿ ಈ ರೀತಿ ಆದರೆ ಇನ್ನು ಜನ ಸಾಮಾನ್ಯರ ಪಾಡೇನು ಎಂದು ಅನುಮಾನ ವ್ಯಕ್ತಪಡಿಸಿ, ಕಾಂಗ್ರೆಸ್ ಪಕ್ಷವು ಭ್ರಷ್ಟ, ಜನವಿರೋಧಿ ಪಕ್ಷ ಎಂದು ದೂರಿ, ಘೋಷಣೆಗಳನ್ನು ಕೂಗಿದರು.ತಹಶೀಲ್ದಾರ್ ಬಿ.ಎನ್.ಸ್ವಾಮಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ಆನಂದಗೌಡ, ವಿನಾಯಕ, ಕನಕಪ್ರಸಾದ್, ರಮೇಶ್‌ಬಾಯಿರಿ, ರಜನೀಕಾಂತ್, ರವಿಕುಮಾರ್, ಶ್ರೀರಾಮ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.