Sidlaghatta : ಶಿಡ್ಲಘಟ್ಟ ತಾಲ್ಲೂಕಿನ ವಿವಿದೆಡೆ ಭಾನುವಾರ ಸುರಿದ ಬಿರುಗಾಳಿ ಸಮೇತ ಆಲೀಕಲ್ಲು ಮಳೆಯಿಂದ ಮಾವು, ದಾಳಿಂಬೆ, ಟಮ್ಯಾಟೋ, ದ್ರಾಕ್ಷಿ ಸೇರಿದಂತೆ ರೈತರು ಬೆಳೆದ ಲಕ್ಷಾಂತರ ರೂ ಬೆಲೆಬಾಳುವ ವಿವಿಧ ಬೆಳೆಗಳು ಹಾಳಾಗಿದ್ದು ಅಧಿಕಾರಿಗಳು ಕೂಡಲೇ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ್ದು ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ಕೊಡಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಡಲಾಗುವುದು ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ತಾಲ್ಲೂಕಿನ ಕಸಬಾ ಹೋಬಳಿಯ ವೈ ಹುಣಸೇನಹಳ್ಳಿ, ಆನೂರು, ತುಮ್ಮನಹಳ್ಳಿ, ಕೊತ್ತನೂರು, ದೇವರಮಳ್ಳೂರು ಸೇರಿದಂತೆ ಜಂಗಮಕೋಟೆ ಹೋಬಳಿಯ ಚೀಮಂಗಲ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿರುಗಾಳಿ ಸಮೇತ ಆಲೀಕಲ್ಲು ಮಳೆಯಿಂದ ಹಾನಿಗೊಳಗಾಗಿದ್ದ ರೈತರ ತೋಟಗಳಿಗೆ ಸೋಮವಾರ ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿ ಮಾತನಾಡಿದರು.
ತಾಲ್ಲೂಕಿನಾದ್ಯಂತ ಭಾನುವಾರ ಸುರಿದ ಮಳೆಯಿಂದ ಮಾವು, ರೇಷ್ಮೆ, ವಾಣಿಜ್ಯ ಬೆಳೆಗಳಾದ ದಾಳಿಂಬೆ, ದ್ರಾಕ್ಷಿ, ಟಮ್ಯಾಟೋ, ಮತ್ತಿತರ ಬೆಳೆಗಳು ಹಾಳಾಗಿರುವ ಬಗ್ಗೆ ಗಮನಕ್ಕೆ ಬಂದ ತಕ್ಷಣ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ರೈತರಿಗಾಗಿರುವ ನಷ್ಟದ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದ್ದು ಈ ಬಗ್ಗೆ ಸರ್ಕಾರದ ಗಮನ ಸೆಳೆದು ನಷ್ಟಕ್ಕೊಳಗಾಗಿರುವ ರೈತರಿಗೆ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.
ವಾಣಿಜ್ಯ ಬೆಳೆಗಾರರು ತಾವು ಬೆಳೆಯುವ ಬೆಳೆಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಹಕಾರ ಪಡೆದು ಬೆಳೆ ವಿಮೆ ಮಾಡಿಸಿದರೆ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸಹಾಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ರೈತರು ಬೆಳೆ ವಿಮೆ ಮಾಡಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ ಬೆಳೆ ಹಾನಿಯಾಗಿರುವ ರೈತರ ಜಮೀನುಗಳಿಗೆ ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಆಗಿರುವ ಹಾನಿಯ ಬಗ್ಗೆ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸುವ ಕೆಲಸ ಮಾಡಲಾಗುವುದು. ಒಂದು ಹೆಕ್ಟೇರ್ ಪ್ರದೇಶಕ್ಕೆ 28 ಸಾವಿರ ಪರಿಹಾರ ನೀಡುವ ಅವಕಾಶವಿದ್ದು ಈಗೆಲ್ಲಾ ಆನ್‌ಲೈನ್ ಮುಖಾಂತರವೇ ಪರಿಹಾರ ವಿತರಿಸುವುದರಿಂದ ಇದೀಗ ವರದಿ ತಯಾರಿಸಿ ಇಟ್ಟುಕೊಂಡಿದ್ದು ಆಗಸ್ಟ್ ತಿಂಗಳಿನಲ್ಲಿ ಆನ್‌ಲೈನ್ ಪೋರ್ಟಲ್ ಶುರುವಾಗಲಿದ್ದು ನಂತರವಷ್ಟೇ ಪರಿಹಾರ ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬಂಕ್ ಮುನಿಯಪ್ಪ, ಹುಜಗೂರು ರಾಮಣ್ಣ, ತಾದೂರು ರಘು, ಲಕ್ಷ್ಮೀಪತಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ತಿಮ್ಮರಾಜು, ಕೃಷಿ ಇಲಾಖೆಯ ಸಿಬ್ಬಂದಿ ಲಕ್ಷ್ಮಿನಾರಾಯಣ ಹಾಜರಿದ್ದರು.