Melur, Sidlaghatta : ಭ್ರಷ್ಟಾಚಾರಮುಕ್ತ ಆಡಳಿತ ನೀಡುವುದೇ ನನ್ನ ಮುಖ್ಯ ಗುರಿ. ಕ್ಷೇತ್ರದ ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ತಿಂಗಳಿಗೊಮ್ಮೆ ನಾನೇ ತಾಲ್ಲೂಕು ಕಚೇರಿಗೆ ಬರುತ್ತೇನೆ. ಜನಸಾಮಾನ್ಯರ ಕುಂದುಕೊರತೆಗಳಿಗೆ ಅಲ್ಲಿಯೇ ಅಧಿಕಾರಿಗಳ ಮುಂದೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತೇನೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಮೇಲೂರಿನ ಗೃಹಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಜನಸಾಮಾನ್ಯರು ತಮ್ಮ ಕೆಲಸ ಕಾರ್ಯಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದು ತಪ್ಪಬೇಕು. ಆದಷ್ಟು ಅವರ ಮನೆ ಬಾಗಿಲಿಗೇ ಸೌಲಭ್ಯಗಳು ದೊರಕುವಂತಾಗಬೇಕು. ಪ್ರತಿ ತಿಂಗಳಿಗೊಮ್ಮೆ ಕುಂದುಕೊರತೆಗಳ ಸಭೆ ನಡೆಸಿ ಕ್ಷೇತ್ರದ ಜನ ಸಾಮಾನ್ಯರ ಸಮಸ್ಯೆಗಳನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನವನ್ನು ನಡೆಸುತ್ತೇನೆಂದು ಭರವಸೆ ನೀಡಿದರು.
ಜನರಿಂದ ನಾನು ದೂರ ಇರುವವನಲ್ಲ. ಸದಾ ಸೇವೆಯಲ್ಲಿ ತೊಡಗಿರುವವನು. ಪ್ರಚಾರಕ್ಕಿಂತ ಜನರಿಗೆ ಒಳಿತಾಗುವುದು ಬಹಳ ಮುಖ್ಯ. ಇದುವರೆಗೂ ಆಡಳಿತ ನಡೆಸಿದವರು ಅವರ ಅನುಕೂಲಕ್ಕೆ ರಾಜಕಾರಣ ಮಾಡಿದ್ದಾರೆ. ಆದರೆ ನಾನು ಜನರ ಅನುಕೂಲಕ್ಕೆ ರಾಜಕಾರಣ ಮಾಡುತ್ತೇನೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡು ಜೆಡಿಎಸ್ ಪಕ್ಷವನ್ನು ಮುಗಿಸಲು ಹೊರಟವು. ಆದರೆ ಒಳ ಒಪ್ಪಂದವು ಬಿಜೆಪಿಗೆ ಮುಳುವಾಗಿ ಬಿಜೆಪಿಯೆ ಸೋಲುವಂತಾಯಿತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದು ಅವರ ಸಾಧನೆಗಳಿಂದಲ್ಲ, ಬಿಜೆಪಿ ಪಕ್ಷದವರು ಜೆಡಿಎಸ್ ಪಕ್ಷವನ್ನು ನಾಶಮಾಡಬೇಕೆಂಬ ಕೆಟ್ಟ ತೀರ್ಮಾನದಿಂದಾಗಿ ಈಗ ಕಾಂಗ್ರೆಸ್ ಅಧಿಕಾರ ಪಡೆಯುವಂತಾಗಿದೆ. ಒಳ ಒಪ್ಪಂದಗಳು ಜೆಡಿಎಸ್ ನಲ್ಲಿಲ್ಲ. ಅದೇನಿದ್ದರೂ ರಾಷ್ಟ್ರೀಯ ಪಕ್ಷಗಳ ಕಾರ್ಯತಂತ್ರ. ರಾಷ್ಟ್ರೀಯ ಪಕ್ಷಗಳು ರೈತರಿಗೆ ಬಡವರಿಗೆ ಒಳ್ಳೆಯದು ಮಾಡುವ ಪ್ರಾದೇಶಿಕ ಪಕ್ಷವನ್ನು ಬೆಳೆಯಲು ಬಿಡುವುದಿಲ್ಲ. ಲೋಕಸಭಾ ಕ್ಷೇತ್ರದಲ್ಲಿ ಹಿಂದೆ ಬಿಜೆಪಿಗೆ ಸಹಾಯ ಮಾಡಿದವರೆಲ್ಲ ಇವತ್ತು ಗೆದ್ದಿರುವ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಪ್ರಧಾನಿ ಮೋದಿ ಅವರು 18 ರೋಡ್ ಶೋ ಮಾಡಿದ ಕಡೆ 14 ಶಾಸಕರು ಸೋತಿದ್ದಾರೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರ ಹುಟ್ಟು ಹಬ್ಬದಾಚರಣೆಗೆ ಸಿದ್ದತೆ:
ಮೇ 18 ರಂದು ಗುರುವಾರ ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್‌ನ ವರಿಷ್ಠ ದೇವೇಗೌಡರ 91 ನೇ ವರ್ಷದ ಹುಟ್ಟು ಹಬ್ಬವನ್ನು ಸಾಮಾಜಿಕ ಸೇವೆಗಳ ಮೂಲಕ ಆಚರಿಸಲಿದ್ದೇವೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು, ಪೌಷ್ಟಿಕ ಆಹಾರ ವಿತರಣೆ, ಆಶಾಕಿರಣ ಅಂಧ ಮಕ್ಕಳ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಸೇರಿದಂತೆ ನಾನಾ ರೀತಿಯ ಸಾಮಾಜಿಕ ಸೇವೆಗಳನ್ನು ನಡೆಸಲಾಗುವುದು ಎಂದರು.
ಮುಖಂಡರಾದ ಬಂಕ್ ಮುನಿಯಪ್ಪ, ಮೇಲೂರು ಮಂಜುನಾಥ್, ಅಪ್ಪೇಗೌಡನಹಳ್ಳಿ ಲಕ್ಷ್ಮೀನಾರಾಯಣರೆಡ್ಡಿ, ಸದಾಶಿವ, ಹುಜಗೂರು ರಾಮಣ್ಣ, ಶಿವಕುಮಾರ್, ವಿಜಯ ಬಾವರೆಡ್ಡಿ, ಜೀವಿಕ ಮುನಿಯಪ್ಪ, ಹೈದರಾವಲಿ ಹಾಜರಿದ್ದರು.