Kambadahalli, Sidlaghatta : ರಾಜ್ಯದಲ್ಲಿನ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ನಿಶ್ಚಳವಾದ ಬಹುಮತವನ್ನು ನೀಡಿದ್ದಾರೆ. ಅವರಿಗೆ ನಮ್ಮ ಕಾಂಗ್ರೆಸ್ ಪಕ್ಷ ಹಾಗೂ ಈ ಹಿಂದೆ ಕಾಂಗ್ರೆಸ್ ಪಕ್ಷ ನೀಡಿದ್ದ ಉತ್ತಮ ಜನಪರ ಆಡಳಿತದ ಮೇಲೆ ಇರುವ ನಂಬಿಕೆಯೆ ಇದಕ್ಕೆ ಕಾರಣವಾಗಿದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ತಮ್ಮ ಹುಟ್ಟೂರು ತಾಲ್ಲೂಕಿನ ಕಂಬದಹಳ್ಳಿಗೆ ಸಚಿವರಾದ ನಂತರ ಮೊದಲ ಬಾರಿಗೆ ಭೇಟಿ ನೀಡಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಚುನಾವಣೆ ಸಮಯದಲ್ಲಿ ನಾವು ಈ ನಾಡಿನ ಮತದಾರರಿಗೆ ನೀಡಿದ ಎಲ್ಲ ಐದೂ ಗ್ಯಾರಂಟಿಗಳನ್ನೂ ಈಡೇರಿಸುವುದು ಖಚಿತ ಎಂದರು.
ಅದರಲ್ಲೂ ನಾನು ನಿಭಾಯಿಸುವಂತ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯಿಂದಲೂ ಬಿಪಿಎಲ್‌ನ ಎಲ್ಲ ಕುಟುಂಬಗಳ ಪ್ರತಿ ವ್ಯಕ್ತಿಗೂ ತಲಾ ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ ಪೂರೈಸಲು ನಾವು ಬದ್ಧ, ಇದರಲ್ಲಿ ಎರಡನೇ ಮಾತಿಲ್ಲ ಎಂದರು.
ಇನ್ನುಳಿದ ನಾಲ್ಕೂ ಗ್ಯಾರಂಟಿಗಳನ್ನೂ ಸಹ ಈಡೇರಿಸಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದ್ದು ಅದಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಂಕಿ ಅಂಶ ಸಂಗ್ರಹ, ದಾಖಲೆಗಳ ಸಂಗ್ರಹದಂತ ಕೆಲಸಗಳನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.
ಸಚಿವ ಸಂಪುಟದಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಐದೂ ಗ್ಯಾರಂಟಿಗಳನ್ನು ಈಡೇರಿಸುವುದು ಶತ ಸಿದ್ದ, ಈ ಕುರಿತು ರಾಜ್ಯದ ಮತದಾರರು ಯಾವುದೆ ಆತಂಕ ಪಡುವ ಅಗತ್ಯವಿಲ್ಲ. ವಿರೋಧ ಪಕ್ಷಗಳು ವಿನಾಕಾರಣ ಜನ ಸಾಮಾನ್ಯರನ್ನು ಎತ್ತಿಕಟ್ಟುವ ಕೆಲಸವನ್ನೂ ಮಾಡಲು ಮುಂದಾಗಬಾರದು ಎಂದರು.
ವಿರೋಧ ಪಕ್ಷಗಳು ತಮ್ಮ ಕೆಲಸವನ್ನು ತಾವು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗಲಿ ನಮ್ಮದೇನು ಅಭ್ಯಂತರವಿಲ್ಲ. ವಿರೋಧ ಪಕ್ಷಗಳು ಆರೋಗ್ಯಯುತವಾಗಿ ಟೀಕಿಸಿದಾಗಲೆ ಆಡಳಿತ ಪಕ್ಷದ ನಾವು ಎಚ್ಚರಿಕೆಯಿಂದ ಇರಲು ಸಾಧ್ಯವಾಗಲಿದೆ ಎಂದು ಹೇಳಿದರು.
ಹುಟ್ಟೂರು ಕಂಬದಹಳ್ಳಿ ಇರುವಂತ ಚಿಕ್ಕಬಳ್ಳಾಪುರ ಜಿಲ್ಲೆ ಅಥವಾ ರಾಜಕೀಯವಾಗಿ ಗುರ್ತಿಸಿಕೊಂಡ ಕೋಲಾರ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಳ್ಳುತ್ತೀರೋ ಎಂಬ ಪತ್ರಕರ್ತರ ಪ್ರಶ್ನೆಗೆ ಬೀದರ್ ಜಿಲ್ಲೆಯ ಉಸ್ತುವಾರಿ ಕೊಟ್ಟರೂ ವಹಿಸಿಕೊಳ್ತೇನೆ ಎಂದ ಅವರು, ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ನಾನು ಇಂತದ್ದೇ ಜಿಲ್ಲೆಯ ಉಸ್ತುವಾರಿಯನ್ನು ಕೊಡಿ ಎಂದು ಕೇಳೊಲ್ಲ. ಯಾವ ಜಿಲ್ಲೆಯದ್ದಾದರೂ ಸರಿ ಎಂದು ಉತ್ತರಿಸಿದರು.
ವಕೀಲ ಕೆ.ಟಿ ನಂಜುಂಡ ಗೌಡ, ಕೆ. ಎಮ್. ಪಿಳ್ಳಪ್ಪ, ಕೆ.ಟಿ ಮುನಿರೆಡ್ಡಿ, ಕೆ ಗೋಪಾಲರೆಡ್ಡಿ, ಲಕ್ಷ್ಮಿಪತಿ .ಜೆ, ಜೆ. ಕೃಷ್ಣಪ್ಪ, ಕೆ ಮುನಿಸ್ವಾಮಿ ಗೌಡ, ಕೆ. ವಿ ಮುನೇಗೌಡ, ಜಯರಾಮರೆಡ್ಡಿ, ಕೆ.ಬಿ ಶ್ರೀನಿವಾಸ್, ಮಧು, ನೂತನ್, ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೆಂಕಟೇಶ್ ಮೂರ್ತಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರವಿ, ಹಾಜರಿದ್ದರು