Kambadahalli, Sidlaghatta : ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದೇ ನನ್ನ ಮುಖ್ಯ ಗುರಿ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್ ಹೇಳಿದರು.
ತಾಲ್ಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಭ್ರಷ್ಟಾಚಾರದಿಂದ ಮುಕ್ತ ಮಾಡಲು ಮತ್ತು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ನನ್ನ ಕನಸುಗಳನ್ನು ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತೊಂದು ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಗಳನ್ನು ಸಿದ್ಧಪಡಿಸಿ ಅದಕ್ಕೆ ಪೂರಕವಾಗಿರುವ ಅನುದಾನಗಳನ್ನು ತಂದು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಜಿಲ್ಲೆಯ ಜನರು ಬದಲಾವಣೆ ಕಾಣಬೇಕು ಆ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತೇವೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಕಾಲೇಜುಗಳ ಅಭಿವೃದ್ಧಿಗಾಗಿ ಮತ್ತು ಕಾಲೇಜಿನಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರಥಮ ಆದ್ಯತೆ ನೀಡಲಾಗುವುದು. ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ, ಅವರ ಭವಿಷ್ಯವನ್ನ ಉಜ್ವಲಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಜಿಲ್ಲೆಯ ಕೇಂದ್ರದಲ್ಲಿರುವ ಮಹಿಳಾ ಕಾಲೇಜಿನ ವ್ಯವಸ್ಥೆಯ ಬಗ್ಗೆ ಹಿಂದಿನ ನ್ಯಾಯಾಧೀಶರು ಬಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಲೇಜುಗಳಲ್ಲಿ ಕಲಿಕೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸುವ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡುತ್ತೇನೆ ಎಂದರು.
ಉನ್ನತ ಶಿಕ್ಷಣ ಇಲಾಖೆ ದೊಡ್ಡ ಇಲಾಖೆಯಾಗಿದ್ದು ಬಹಳಷ್ಟು ವಿಚಾರಗಳು ತಿಳಿದುಕೊಳ್ಳಬೇಕಾಗಿದೆ. ವರ್ಗಾವಣೆಯ ಸಮಯ ಕೂಡ ಆಗಿರುವುದರಿಂದ ಸಹಜ ಬಹಳಷ್ಟು ಒತ್ತಡವಿರುತ್ತದೆ. ಹತ್ತಿರದಲ್ಲಿಯೇ
ವಿಧಾನಸಭೆಯ ಅಧಿವೇಶನ ಸಹ ನಡೆಯಲಿದ್ದು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವ ಸಲುವಾಗಿ ಕಚೇರಿಯನ್ನು ತೆರೆಯಲಾಗಿದೆ. ಮೊಟ್ಟಮೊದಲಿಗೆ ಕಚೇರಿಯಲ್ಲಿ ಸಿಬ್ಬಂದಿ ಮತ್ತು ಪೂರಕ ವ್ಯವಸ್ಥೆಗಳನ್ನು ಒದಗಿಸಿ ಅನಂತರ ಜನರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸವನ್ನು ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಬಡವರಿಗೆ ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರದಿಂದ ದ್ವೇಷ ಮತ್ತು ಅಸೂಯೆ ದ ರಾಜಕಾರಣ ನಡೆಯುತ್ತಿದೆ. ಅದನ್ನು ನಾವೆಲ್ಲರೂ ತೀವ್ರವಾಗಿ ಖಂಡಿಸಿ ಬೇಕು. ಒಕ್ಕೂಟದ ವ್ಯವಸ್ಥೆಯಲ್ಲಿ ಅಕ್ಕಿ ಕೊಡಿ ಎಂದು ನಾವು ಕೇಳಿದಾಗ ಒಂದು ಸಾರಿ ಕೊಡುತ್ತೇವೆ ಎಂದು ಮತ್ತೊಂದು ಬಾರಿ ಯಾವ ರಾಜ್ಯಕ್ಕೆ ಕೊಡುವುದಿಲ್ಲ ಎಂದು ಹೇಳುವ ಮೂಲಕ ಬಡವರ ವಿರೋಧಿ ಧೋರಣೆಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಈಗಾಗಲೇ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಮಂತ್ರಿಗಳು ರಾಜ್ಯಗಳೊಂದಿಗೆ ಸಂಪರ್ಕ ಸಾಧಿಸಿ ಅಕ್ಕಿ ಖರೀದಿ ಮಾಡಿ ಬಡವರಿಗೆ ಒದಗಿಸುವ ಮೂಲಕ ಕೊಟ್ಟಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ವಿವರಿಸಿದರು.
ಮುಖಂಡರಾದ ಜಿ.ಮುನಿಯಪ್ಪ, ಸಚಿವರ ಪತ್ನಿ ಸ್ವಪ್ನ, ಸಚಿವರ ಸಹೋದರ ಬಾಲಾಜಿ, ಕೆ.ಲಕ್ಷ್ಮೀಪತಿರೆಡ್ಡಿ, ತಹಶೀಲ್ದಾರ್ ಬಿ.ಎನ್.ಸ್ವಾಮಿ, ಸಿಪಿಐ ನಂದ್ ಕುಮಾರ್, ವಕೀಲ ಕೆ ಜಯರಾಂರೆಡ್ಡಿ, ಕೆ.ಬಿ. ಶ್ರೀನಿವಾಸ್, ಕೆ.ನಾಗರಾಜ್, ನೂತನ್, ಮಂಜುನಾಥ್ ಬಚ್ಚೇಗೌಡ, ಕೀರ್ತಿ, ಕೆ.ಸಿ.ಮುನೇಗೌಡ, ಕೆ.ರಾಜಗೋಪಾಲ್, ಕಂಬದಹಳ್ಳಿ ಸುರೇಂದ್ರಗೌಡ ಹಾಜರಿದ್ದರು.