Home News ಕೊರೊನಾ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ಮಗನರೇಗಾ ಯೋಜನೆ ಮೂಲಕ ಉದ್ಯೋಗ

ಕೊರೊನಾ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ಮಗನರೇಗಾ ಯೋಜನೆ ಮೂಲಕ ಉದ್ಯೋಗ

0

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಕೊರೊನಾ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಫೌಝೀಯಾ ತರುನ್ನುಮ್ ತಿಳಿಸಿದರು.

 ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ವೀಕ್ಷಿಸಿ ಅವರು ಮಾತನಾಡಿದರು. ಜಗತ್ತಿನಾದ್ಯಂತ ಕೊರೊನಾ ಸೋಂಕು ಕಾಡುತ್ತಿದೆ. ಈ ಸೋಂಕು ನಿವಾರಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಇಂತಹ ಕಷ್ಟದಲ್ಲಿ ಕೂಲಿಗಾಗಿ ವಲಸೆ ಹೋಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನರೇಗಾ ಯೋಜನೆಯ ಮೂಲಕ ದುಡಿಯುವ ಕೈಗಳಿಗೆ ಕೆಲಸದ ರೂಪದಲ್ಲಿ ಉದ್ಯೋಗ ಕಲ್ಪಿಸಲಾಗಿದೆ. ನರೇಗಾ ಯೋಜನೆ ಕೂಲಿ ಕಾರ್ಮಿಕರಿಗೆ ವರದಾನವಾಗಿದೆ ಎಂದರು.

 ಜಿಲ್ಲೆಯ ಕೆಲ ಭಾಗಗಳಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ನರೇಗಾ ಯೋಜನೆಯಡಿ ನಿರ್ಮಿಸಿರುವ ಬಹುಕಮಾನ್ ಚೆಕ್‌ಡ್ಯಾಂಗಳು, ಕಲ್ಯಾಣಿಗಳು ಮತ್ತು ಕುಂಟೆಗಳಲ್ಲಿ ನೀರು ಶೇಖರಣೆಯಾಗಿದೆ. ಜೊತೆಗೆ ರೈತರು ನಿರ್ಮಿಸಿಕೊಂಡಿರುವ ಬದುಗಳಲ್ಲಿ ಸಹ ಮಳೆನೀರು ಶೇಖರಣೆಯಾಗಿದ್ದರಿಂದ ಅಂರ್ತಜಲಮಟ್ಟ ವೃದ್ಧಿಯಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನರೇಗಾ ಯೋಜನೆಯ ಮೂಲಕ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಬೇಕೆಂದು ಸೂಚಿಸಿದರು.

 ಇದೇ ವೇಳೆಯಲ್ಲಿ ಹಕ್ಕಿಪಿಕ್ಕಿ ಕಾಲೋನಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಗ್ರಾಮಸ್ಥರು ನೀರಿಗಾಗಿ ಕೊಳವೆಬಾವಿ ಕೊರೆಸಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಧಾನಮಂತ್ರಿ ಆವಾಝ್ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಅಗತ್ಯ ಸಹಕಾರ ಮತ್ತು ನೆರವು ಕಲ್ಪಿಸಲಾಗುವುದೆಂದು ಭರವಸೆ ನೀಡಿದರು.

 ಗ್ರಾಮ ಪಂಚಾಯಿತಿಗೆ ಭೇಟಿ: ನರೇಗಾ ಯೋಜನೆಯಡಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಬಳಿಕ ಕೊರೊನಾ ಸೋಂಕು ನಿಯಂತ್ರಿಸಲು ಸ್ಥಾಪಿಸಿರುವ ಸಹಾಯವಾಣಿ ಕೇಂದ್ರಗಳಿಗೆ ಎಷ್ಟು ದೂರುಗಳು ಬಂದಿದೆ ಅಧಿಕಾರಿಗಳು ಹೇಗೆ ಸ್ಪಂದಿಸಿದ್ದಾರೆ ಎಂಬುದನ್ನು ಪರಿಶೀಲಿಸಿದರು. ಕೊರೊನಾ ಸೋಂಕು ನಿಯಂತ್ರಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಗ್ರಾಮಸ್ಥರು ಸಹ ಮನೆಯಿಂದ ಹೊರಬರುವುದನ್ನು ಸ್ವಯಂ ನಿಯಂತ್ರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ಸೋಂಕು ನಿಯಂತ್ರಿಸಲು ಸಹಕರಿಸಬೇಕೆಂದು ಕೋರಿದರು.

 ತಾಲ್ಲೂಕು ಪಂಚಾಯಿತಿ ಇಓ ಶಿವಕುಮಾರ್, ಗಂಜಿಗುಂಟೆ ಗ್ರಾಪಂ ಪಿಡಿಓ ರಮೇಶ್, ರಾಮಬಾಬು ಹಾಜರಿದ್ದರು.