ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧ ಮಾಡುವುದು, ನಾಡಧ್ವಜಕ್ಕೆ ಬೆಂಕಿ ಇಟ್ಟ ಹಾಗೂ ಕನ್ನಡಿಗರ ಮೇಲೆ ದೌರ್ಜನ್ಯವೆಸಗಿದ ಎಂಇಎಸ್ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಮಾನ ಮನಸ್ಕರ ಒಕ್ಕೂಟದ ಮುಖಂಡ ರಾಮಾಂಜಿ ಒತ್ತಾಯಿಸಿದರು.
ಕನ್ನಡಪರ ಸಂಘಟನೆಗಳಿಂದ ಶುಕ್ರವಾರ ನಡೆಯಬೇಕಿದ್ದ ಬಂದ್ ವಾಪಸ್ ಪಡೆದ ಹಿನ್ನಲೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ನಗರದ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೂ ಕನ್ನಡ ನಾಡಧ್ವಜವನ್ನು ಹೊತ್ತು ಮೆರವಣಿಗೆ ನಡೆಸಿ ತಹಶೀಲ್ದಾರ್‌ರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.
ಬೆಳಗಾವಿ ವಿಧಾನಸಭೆ ಅಧಿವೇಶನದ ಸಮಯದಲ್ಲಿ ಬೆಳಗಾವಿಯ ಎಂಇಎಸ್ ಮತ್ತು ಶಿವಸೇನೆಯ ಪುಂಡರು ಕನ್ನಡ ನಾಡಿನ ಹೆಮ್ಮೆಯ ಸ್ವಾಭಿಮಾನದ ಪ್ರತೀಕವಾದ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದು, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಭಗ್ನಗೊಳಿಸಿದ್ದು, ಅಲ್ಲದೆ ಕನ್ನಡ ನಾಡಿನ ಹೆಮ್ಮೆಯ ಜಗಜ್ಯೋತಿ ಬಸವೇಶ್ವರ ಭಾವಚಿತ್ರವನ್ನು ವಿರೂಪಗೊಳಿಸಿ ಶಾಂತ ಪ್ರಿಯರಾದ ಕನ್ನಡಿಗರ ಸ್ವಾಭಿಮಾನಿಕ್ಕೆ ಧಕ್ಕೆ ತಂದಿದ್ದಾರೆ. ಕೂಡಲೇ ಸರ್ಕಾರ ಕ್ರಮ ಜರುಗಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ಮಾತನಾಡಿ, ರಾಜ್ಯ ಸರ್ಕಾರದ ವಾಹನಗಳ ಮತ್ತು ಕನ್ನಡಿಗರ ವಾಹನಗಳನ್ನು ನಾಶಪಡಿಸುವ ಮೂಲಕ ರಾಜದ್ರೋಹದ ಕೆಲಸಗಳನ್ನು ಮಾಡಿ ಕನ್ನಡಿಗರ ಮೆಲೆ ಹಲ್ಲೆಯನ್ನು ಮಾಡಿರುವುದು ಅತ್ಯಂತ ಖಂಡನೀಯ. ಚಳಿಗಾಲದ ಅಧಿವೇಶನದ ಸಮಯದಲ್ಲಿ ಎಂಇಎಸ್ ಪುಂಡರು ಭಾಷಾ ಸಮುದಾಯದ ನಡುವೆ ದ್ವೇಷ, ಪ್ರತಿಕಾರದ ಭಾವನೆಗಳನ್ನು ಮೂಡಿಸಿ ಹಿಂಸಾಚಾರಕ್ಕೆ ಪದೆ ಪದೇ ಪ್ರಚೋದಿಸುವ ಕೃತ್ಯಗಳಿಗೆ ದಾರಿ ಮಾಡುತ್ತಿದ್ದು ಪುಂಡಾಟಿಕೆ ನಡೆಸಿರುವ ಕಿಡಿಗೇಡಿಗಳನ್ನು ರಾಜ್ಯದಿಂದ ಕೂಡಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ನಗರದ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೂ ಇದೇ ಮೊದಲ ಬಾರಿಗೆ 125 ಅಡಿ ಉದ್ದದ ನಾಡಧ್ವಜದೊಂದಿಗೆ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ನಡೆಸಿ ತಹಶೀಲ್ದಾರ್ ರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ್ರೆಸೆಂಟ್ ವಿದ್ಯಾಸಂಸ್ಥೆಯ ತಮೀಮ್ ಅನ್ಸಾರಿ, ಡಾಲ್ಫಿನ್ ವಿದ್ಯಾ ಸಂಸ್ಥೆಯ ಅಶೋಕ್, ವಾಸವಿ ವಿದ್ಯಾ ಸಂಸ್ಥೆಯ ಗೋಪಿನಾಥ್, ರೈತ ಮುಖಂಡ ಪ್ರತೀಶ್, ಸ್ನೇಹ ಯುವಕರ ಸಂಘದ ಅಧ್ಯಕ್ಷ ಭರತ್, ಕನ್ನಡಪರ ಸಂಘಟನೆಗಳ ಸುನಿಲ್, ಲೋಕೇಶ್, ಮಂಜುನಾಥ್, ನಾರಾಯಣಸ್ವಾಮಿ ಹಾಜರಿದ್ದರು.