ಮೇಲೂರು ಗ್ರಾಮ ಪಂಚಾಯಿತಿ, ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟ ಮತ್ತು ಶ್ರೀ ಸರಸ್ವತಿ ಸಂಜೀವಿನಿ ಸಹಯೋಗದಲ್ಲಿ ಮೇಲೂರಿನ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಅಂತರರಾಷ್ಟೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ನಾಗವೇಣಿ ಮಾತನಾಡಿದರು.
ಮಹಿಳೆಯರ ಆರ್ಥಿಕ ಅಭಿವೃದ್ಧಿಯೊಂದಿಗೆ ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯದೊಂದಿಗೆ ಸಮಗ್ರವಾಗಿ ಮುಖ್ಯವಾಹಿನಿಗೆ ಬರಬೇಕಿದೆ. ಮಹಿಳೆಯರಿಗೆ ಶಿಕ್ಷಣ, ಅರಿವು ಮೂಡಿಸುವ ಮೂಲಕ ಸಶಕ್ತರನ್ನಾಗಿ ಮಾಡಬೇಕು, ಅದರಲ್ಲೂ ಕೌಶಲ್ಯ ಅಭಿವೃದ್ಧಿ ಮತ್ತು ಆರ್ಥಿಕ ಚಟುವಟಿಕೆ ಒತ್ತುಕೊಡುವ ಮೂಲಕ ಮಹಿಳೆಯರಲ್ಲಿ ದುಡಿಮೆಯ ಶಕ್ತಿ ಮತ್ತು ಜೀವನಮಟ್ಟವನ್ನು ಹೆಚ್ಚಿಸಬೇಕಿದೆ ಎಂದರು.
ಮಹಿಳೆಯರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಸಮಗ್ರ ಸಮಾಜದ ಅಭಿವೃದ್ಧಿಯಾಗಲು ಸಾಧ್ಯ. ಬಾಲ್ಯ ವಿವಾಹ ಪದ್ದತಿಯನ್ನು ನಿರ್ಮೂಲನಗೊಳಿಸಬೇಕು ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಮಾತನಾಡಿ, ಮಹಿಳೆಯರು ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕಾದರೆ ಸ್ವಾವಲಂಬಿ ಬದುಕು ಕಟ್ಟಿಕೊಂಡಾಗ ಮಾತ್ರ ಸಾಧ್ಯ. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಬೇಕು. ಈ ಸಮಾಜದಲ್ಲಿ ಆರ್ಥಿಕತೆಗೆ ತಕ್ಕಂತೆ ಬೆಲೆ ಸಿಗುವುದರಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ ಎಂದರು.
ಮಹಿಳೆಯರು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಹೆಣ್ಣಿನ ಬಗ್ಗೆ ಇರುವ ತಪ್ಪು ಭಾವನೆಗಳು ತೊಲಗುತ್ತವೆ. ಸುತ್ತಮುತ್ತಲಿನ ವಾತಾವರಣದಲ್ಲಿ ನಿಮ್ಮ ಸ್ವಾವಲಂಬಿ ಜೀವನ ಸ್ಫೂರ್ತಿಯಾಗಲಿ. ಸರ್ಕಾರದ ಅನೇಕ ಯೋಜನೆಗಳು ಮತ್ತು ಕಾಯ್ದೆಗಳು ಮಹಿಳೆ ಪರವಾಗಿದ್ದು, ಅವುಗಳನ್ನು ಉಪಯೋಗಿಸಿಕೊಂಡು ಮುಂದೆ ಬನ್ನಿ ಎಂದು ಸಲಹೆ ನೀಡಿದರು.
ನಮ್ಮ ಸಂಸ್ಕೃತಿ ,ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಪ್ರಮುಖ ಪಾತ್ರ ಮಹಿಳೆಯರದು. ಮನೆಗೊಂದು ಗಿಡ ನೆಡಿ, ನೀರನ್ನು ಮಿತವಾಗಿ ಬಳಸಿ, ಸ್ವಚ್ಛತೆ ಕಾಪಾಡಿ, ಆರೋಗ್ಯದ ಜೀವನ ನಡೆಸಿ ಎಂದು ಸಲಹೆ ನೀಡದರು.
ಕಾಕಚೊಕ್ಕಂಡಹಳ್ಳಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸುಮಾ ಮಾತನಾಡಿ, ಮಕ್ಕಳಿಗೆ ಎಲ್ಕೇಜಿ, ಪ್ರಿಕೇಜಿ, ಶಿಕ್ಷಣ ಕೊಡಿಸುವ ಮೋಜಿಗೊಳಗಾಗದೆ ಮಕ್ಕಳಿಗೆ ತಾಯಿ ಪ್ರೀತಿ ಮೌಲ್ಯವನ್ನು ಕೊಡಿ ಎಂದರು.
ಚಿಕ್ಕಬಳ್ಳಾಪುರ ಲೀಡ್ ಬ್ಯಾಂಕ್ ನ ಬಸವರಾಜ್ ಮಾತನಾಡಿ, ಸ್ತ್ರೀಶಕ್ತಿ ಸಂಘಗಳ ಸದಸ್ಯರು ಸಾಲ ಪಡೆದು ನಿಗದಿತ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಮಹಿಳೆಯರು ಸಬಲರಾಗಲು ಆರ್ಥಿಕವಾಗಿ ಸದೃಡರಾಗಲು ಬ್ಯಾಂಕ್ ಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಕೋವಿಡ್ ನಿರ್ವಹಣೆ ಮಾಡಿದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರುಗಳಿಗೆ ಹಾಗೂ ರಂಗೋಲಿ ಸ್ಪರ್ಧೆ, ಮ್ಯೂಜಿಕಲ್ ಚೇರ್ ಸ್ಪರ್ಧೆಗಳಲ್ಲಿ ವಿಜೇತರಾದ ಸ್ತ್ರೀ ಸಂಘಗಳ ಸದಸ್ಯರಿಗೆ ಬಹುಮಾನ ವಿತರಣೆ ಮತ್ತು ಅನುಪಮ ಶಿಕ್ಷಕಿ ಪ್ರಶಸ್ತಿ ವಿಜೇತ ಮೇಲೂರಿನ ತನುಜಾಕ್ಷಿ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಬಾಗ್ಯಲಕ್ಷ್ಮಿ, ಶೋಭ, ಗೀತಾಂಜಲಿ, ಸವಿತಾ, ಅಂಬಿಕಾ, ಎಂ.ಕೆ.ರವಿಪ್ರಸಾದ್, ಎಂ.ಜೆ.ಶ್ರೀನಿವಾಸ್, ಸಿ.ಕೆ.ಗಜೇಂದ್ರಬಾಬು, ನಾರಾಯಣಸ್ವಾಮಿ, ದೇವರಾಜ್, ಸ್ತೀ ಸಂಘಗಳ ಒಕ್ಕೂಟ ಅಧ್ಯಕ್ಷೆ ಭಾರತಿ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಕುಮಾರ್, ಪಿಡಿಓ ಶಾರದಾ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಸುಜಾತ, ಶ್ರೀ ಸಂಜೀವಿನಿ ಸರಸ್ವತಿ ಒಕ್ಕೂಟದ ಗಂಗೂಬಾಯಿ, ಗೌರಮ್ಮ, ಪ್ರೇಮ, ಸಂಪನ್ಮೂಲ ವ್ಯಕ್ತಿ ಸರೋಜ ಹಾಜರಿದ್ದರು.