ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲಾ ರಸ್ತೆಯಲ್ಲಿ ಡಾ.ಶ್ರೀ ಶಿವಕುಮಾರಮಹಾಸ್ವಾಮೀಜಿ ಸೇವಾಸಮಿತಿಯ ಆಶ್ರಯದಲ್ಲಿ ಆರಂಭವಾದ ಮಾತೃಮಡಿಲು ದಿವ್ಯಾಂಗರ ಸೇವಾಮಂದಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ವಿವಿಧ ಸವಲತ್ತುಗಳ ವಿತರಿಸಿ ರಾಷ್ಟ್ರೀಯ ಬಸವದಳದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಬಿ.ಬಸವರಾಜೇಂದ್ರಪ್ಪ ಮಾತನಾಡಿದರು.
ಎಲ್ಲಾ ಅಂಗಗಳನ್ನು ಚೆನ್ನಾಗಿ ಹೊಂದಿದ್ದರೂ ಕೆಲವರು ಕಷ್ಟಪಟ್ಟು ದುಡಿಯಲು ಹಿಂಜರಿಯುತ್ತಾರೆ. ಕೆಲವು ಅಂಗವಿಕಲರು ಶ್ರಮಪಟ್ಟು ದುಡಿಯುವುದನ್ನು ನೋಡುತ್ತಿದ್ದೇವೆ. ಸಮಾಜದಲ್ಲಿ ಬಡವರು, ನೊಂದವರು, ಕೈಲಾಗದವರಿಗೆ ಕರುಣೆ ತೋರಿ ಸಹಕಾರ ನೀಡುವುದು ನಮ್ಮ ಗುರಿಯಾಗಬೇಕು. ಆ ಮೂಲಕ ದೇವರನ್ನು ಕಾಣುವುದು ಸಾಧ್ಯವಿದೆ ಎಂದು ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಜಗತ್ತಿನ ಮಾನವ ಸಂಪತ್ತಿನಲ್ಲಿ ಅಂಗವಿಕಲರೂ ಸೇರಿದ್ದಾರೆ. ರಾಷ್ಟ್ರದ ಅಭಿವೃದ್ಧಿಯ ಪಾಲುದಾರರನ್ನಾಗಿ ಅಂಗವಿಕಲರಿಗೆ ಆತ್ಮಸ್ಥೈರ್ಯ ತುಂಬಬೇಕಿದೆ. ಅಂಗವಿಕಲರಲ್ಲಿ ಅಗಾಧ ಕೌಶಲ್ಯಗಳಿದ್ದು ಅವುಗಳನ್ನು ಸಿಕ್ಕ ಅವಕಾಶದಲ್ಲಿ ಸದ್ಬಳಕೆ ಮಾಡಿಕೊಂಡು ಔನತ್ಯಹೊಂದುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.
ಮಾತೃಮಡಿಲು ದಿವ್ಯಾಂಗ ಸೇವಾಮಂದಿರದ ಸಂಚಾಲಕ ಬಿ.ಎಂ.ಜಗದೀಶ್ ಮಾತನಾಡಿ, ಭಾರತೀಯ ಸಂಸ್ಕೃತಿಯ ಭಾಗವಾಗಿರುವ ತ್ಯಾಗ ಮತ್ತು ಸೇವೆಗಳನ್ನು ಆದರ್ಶಗಳನ್ನಾಗಿ ಸ್ವೀಕರಿಸಿದಾಗ ಸಾರ್ಥಕ ಜೀವನ ನಡೆಸಲು ಸಾಧ್ಯವಾಗಿ ಬದುಕಿನಲ್ಲಿ ತೃಪ್ತಿಯನ್ನು ಪಡೆಯಲು ಬಹುದು ಎಂದರು.
ಡಾ.ಶಿವಕುಮಾರಮಹಾಸ್ವಾಮೀಜಿ ಸೇವಾಸಮಿತಿಯ ಮುಖಂಡ ಶಂಕರ್ ಮಾತನಾಡಿ, ಮಾನವ ಶರೀರದ ಹುಟ್ಟಿನ ನಂತರ ರೋಗ, ಸಂಕಷ್ಟಗಳಿಂದ ನಲುಗಿ ಸಾವನ್ನಪ್ಪುವುದರಿಂದ ಅದು ಅಸತ್ಯ. ಅಸತ್ಯದಿಂದ ಸತ್ಯವಾದುದೆಡೆಗೆ, ಬುದ್ಧಿಯಲ್ಲಿನ ತಾಮಸವನ್ನು ಹೋಗಲಾಡಿಸಿ ಬೆಳಕಿನೆಡೆಗೆ ಸಾಗುವತ್ತ ಗಮನವಹಿಸಬೇಕು ಎಂದರು.
ಗುಡುವನಹಳ್ಳಿಯ ನಾರಾಯಣಪ್ಪಸ್ವಾಮಿ ಮಾತನಾಡಿ, ಮಗುವಿನಲ್ಲಿರುವ ಅರಿವು ಜಾಗೃತಗೊಳ್ಳುವಲ್ಲಿ ಕೊರತೆಯಾಗದಂತೆ ಕ್ರಮವಹಿಸಬೇಕು. ಮಾನವ ಜನ್ಮವನ್ನು ಹಾನಿಮಾಡಿಕೊಳ್ಳದೇ ಮಾನವೀಯಮೌಲ್ಯಗಳನ್ನು ಬೆಳೆಸಿಕೊಂಡು ಬದುಕಬೇಕು ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ನವಜೀವನಸೇವಾಸಂಘದ ಅಧ್ಯಕ್ಷ ಬೆಳ್ಳೂಟಿ ಮುನಿರಾಜು ಮಾತನಾಡಿ, ಎಲ್ಲಾ ಕ್ಷೇತ್ರದಲ್ಲಿಯೂ ಅಂಗವಿಕಲರಿಗೆ ವಿಶೇಷ ಮೀಸಲಾತಿ ಅವಕಾಶಗಳಿದ್ದು, ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗವನ್ನು ಗಿಟ್ಟಿಸಿಕೊಳ್ಳಬಹುದು. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಂಡು ದಿವ್ಯಾಂಗರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಶಿವಧ್ಯಾನ, ಮಂತ್ರ ಪಠಣ, ಭಕ್ತಿಗೀತೆಗಳ ಗಾಯನ ನಡೆಯಿತು. ಬೆಂಗಳೂರಿನ ಶಾಪರ್ಸ್ ಸ್ಟಾಪ್ ಸಂಘದ ವತಿಯಿಂದ ಅಂಗವಿಕಲ ಮಕ್ಕಳಿಗೆ ಕಲಿಕಾ ಮತ್ತು ಕ್ರೀಡಾ ಕಿಟ್‌ಗಳನ್ನು ವಿತರಿಸಲಾಯಿತು. ಅಂಗವಿಕಲರ ಕುಟುಂಬಗಳಿಗೆ ಉಚಿತ ದಿನಸಿ ವಿತರಿಸಲಾಯಿತು.
ನಿವೃತ್ತ ಅಂಚೆನೌಕರ ರಾಮಾಂಜಿನಪ್ಪ, ಮುಖಂಡ ನಂಜುಂಡಮೂರ್ತಿ, ಪತಂಜಲಿಯೋಗಶಿಕ್ಷಣ ಸಮಿತಿಯ ರಾಜ್ಯ ಮಹಿಳಾ ಸಂಚಾಲಕಿ ದೀಪಾ.ಜೆ.ರಮೇಶ್, ವಂದನಾ, ಮುನೇಗೌಡ, ಶಿಕ್ಷಕಿ ತನುಜಾಕ್ಷಿ, ಅಹಲ್ಯಾ, ರಾಧಾ, ಗಂಗಾಧರ್, ಮದನ್, ರಾಜು, ರಾಘವೇಂದ್ರ, ಬೆಂಗಳೂರಿನ ಶಾಪರ್ಸ್ ಸ್ಟಾಪ್ ಸಂಘದ ನಿರ್ದೇಶಕರು ಹಾಜರಿದ್ದರು.