Melur, Sidlaghatta : ನಾಮಪತ್ರ ಸಲ್ಲಿಕೆ, ಚುನಾವಣೆ ಪ್ರಚಾರ, ಬಾಲಕ, ಬಾಲೆಯರಿಂದ ಮತದಾನ, ಮುಖ್ಯಮಂತ್ರಿ ಆಯ್ಕೆ, ಉಪಮುಖ್ಯಮಂತ್ರಿ, ಸಚಿವರ ಆಯ್ಕೆ. ಇದು ತಾಲ್ಲೂಕಿನ ಮೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಶಾಲಾ ಮಕ್ಕಳ ಸಂಸತ್ ಚುನಾವಣೆಯಲ್ಲಿ ಕಂಡು ಬಂದ ದೃಶ್ಯ.
“ಶಾಲೆಯ ವಿವಿಧ ಚಟುವಟಿಕೆಗಳಾದ ಸಾಂಸ್ಕೃತಿಕ, ಕ್ರೀಡಾ, ಶಾಲೆ ಸ್ವಚ್ಛತೆ, ಊಟ ಇನ್ನಿತರ ಚಟುವಟಿಕೆಗಳಲ್ಲಿ ಜವಾಬ್ದಾರಿ ತೆಗೆದುಕೊಂಡು ಅದರಲ್ಲಿನ ನ್ಯೂನತೆಗಳನ್ನು ಮುಖ್ಯ ಶಿಕ್ಷಕರಿಗೆ ತೋರಿಸಿ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಈ ಚುನಾವಣೆ ನಡೆಸಲಾಗಿದೆ. ಅಲ್ಲದೇ ಪಠ್ಯದಲ್ಲಿದ್ದನ್ನು ಪ್ರಾತ್ಯಕ್ಷಿಕವಾಗಿ ತೋರಿಸಿ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವುದು ಚುನಾವಣೆ ಮತ್ತು ಸಂಸತ್ ರಚನೆ ಉದ್ದೇಶವಾಗಿದೆ. ಮಕ್ಕಳಿಗೆ ಜವಾಬ್ದಾರಿ, ಮುಂದಾಳತ್ವ, ಎಲ್ಲರನ್ನು ಸಂಬಾಳಿಸುವ ಶಕ್ತಿಯ ವದ್ಧಿ ಶಾಲಾ ಸಂಸತ್ ಚುನಾವಣೆ ಗುರಿಯಾಗಿದೆ” ಎಂದು ಮುಖ್ಯ ಶಿಕ್ಷಕ ಭಾಸ್ಕರ್ ತಿಳಿಸಿದರು.
ಮಕ್ಕಳೇ ಎಲ್ಲ ಕಾರ್ಯಗಳಲ್ಲಿ ಭಾಗಿಯಾಗಿ ಚುನಾವಣೆ ಅನುಭವ ಪಡೆದರು. ನಿಜವಾದ ವಿಧಾನ ಸಭೆ, ಲೋಕಸಭೆ ಚುನಾವಣೆಗಳ ಮಾದರಿಯಲ್ಲೇ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ಹಿಂತೆಗೆದು ಕೊಳ್ಳುವಿಕೆ, ಪ್ರಚಾರ, ಮತದಾನ ಎಲ್ಲವೂ ವ್ಯವಸ್ಥಿತವಾಗಿ ಏರ್ಪಟ್ಟಿತ್ತು. ಪ್ರಜಾ ಪ್ರಭುತ್ವ ಎಂದರೆ ಏನು? ಮತದಾನದ ರೀತಿ ನೀತಿಗಳೇನು, ಮತದಾನ ಹೇಗೆ ಮಾಡಬೇಕು, ಸಂಸತ್ ಹೇಗಿರುತ್ತದೆ, ಮುಖ್ಯಮಂತ್ರಿಗಳ ಕೆಲಸ, ಮಂತ್ರಿಗಳ ಕಾರ್ಯಗಳ ಕುರಿತು ಚುನಾವಣೆ ಮತ್ತು ಸಂಸತ್ ರಚನೆ ಮೂಲಕ ಎಲ್ಲದರ ಬಗ್ಗೆ ವಿದ್ಯಾರ್ಥಿಗಳು ಶಿಕ್ಷಕರಿಂದ ಮಾಹಿತಿ ಪಡೆದರು.
ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್ ತಂದು, ಮೊಬೈಲ್ ನಲ್ಲಿರುವ ವೋಟಿಂಗ್ ಮೆಷಿನ್ ಆಪ್ ಮೂಲಕ ಮತದಾನ ಮಾಡಿ, ತಮ್ಮ ಎಡಗೈ ತೋರುಬೆರಳಿಗೆ ಶಾಯಿಯನ್ನು ಹಚ್ಚಿಸಿಕೊಂಡು ಸಂತಸದಿಂದ ಸರತಿ ಸಾಲಿನಲ್ಲಿ ನಿಂತು ಗುಪ್ತ ಮತದಾನ ಮಾಡಿದರು. ನಂತರ ಫಲಿತಾಂಶವೂ ಪ್ರಕಟಗೊಳಿಸಲಾಯಿತು.
ಶಿಕ್ಷಕರಾದ ಬಿ.ಎಂ.ವೆಂಕಟಶಿವಾರೆಡ್ಡಿ, ಸಿ.ಸುಜಾತ, ಎಂ.ಎಸ್.ವಿದ್ಯಾ, ಎಂ.ಗಾಯತ್ರಿ, ಜಿ.ಸವಿತಾ, ದೇವಮ್ಮ, ತುಳಸಿಮಾಲಾ, ಪದ್ಮ, ಅರುಣಾ, ನಾಗರಾಜು ಹಾಜರಿದ್ದರು.