ಮೇಲೂರು ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಉದ್ಯಾನವನನ್ನು ನಿರ್ಮಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ಮಾಡಿ ಮಾತನಾಡಿದ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳು ಉತ್ತಮ ಆಮ್ಲಜನಕ ಗಾಳಿಯ ಸೇವನೆಯಿಂದ ಆರೋಗ್ಯವಂತರಾಗಿ ತೆರಳಲು ಉದ್ಯಾನವನ ಸಹಕಾರಿಯಾಗಲಿದೆ ಎಂದು ಹೇಳಿದರು.
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಂಡು ಮೇಲೂರು ಗ್ರಾಮ ಪಂಚಾಯತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೇ ನರೇಗಾ ಯೋಜನೆಯನ್ನು ಬಳಸಿಕೊಂಡು ಮಳೆ ನೀರು ಸಂರಕ್ಷಣೆ ಮಾಡುವ ಸಲುವಾಗಿ ಕುಂಟೆಗಳನ್ನು ನಿರ್ಮಿಸಲಾಗಿದೆ. ಅದೇ ರೀತಿ ಗ್ರಾಮ ಪಂಚಾಯತಿಯ ಹಳೆ ಕಟ್ಟಡವನ್ನು ನೆಲಸಮಗೊಳಿಸಿ ಮಾದರಿ ರಾಜೀವ್ ಗಾಂಧಿ ಸೇವಾ ಕೇಂದ್ರ ಮತ್ತು ಡಿಜಿಟಲ್ ಲೈಬ್ರರಿ ಮಾಡಲು ಉದ್ದೇಶ ಹೊಂದಿರುವುದಾಗಿ ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಕೆ. ರವಿಪ್ರಸಾದ್, ಗೋಪಾಲರೆಡ್ಡಿ, ಎಂ.ಜೆ.ಪ್ರಭಾಕರ್, ಎಸ್.ಆರ್.ವೆಂಕಟೇಶ್,ಪಿಡಿಒ ಶಾರದಾ ಹಾಗೂ ಬಿಲ್ ಕಲೆಕ್ಟರ್ ಜನಾರ್ಧನ್ ಹಾಜರಿದ್ದರು.