ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಯರ್ರಹಳ್ಳಿ ಗ್ರಾಮದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವಾರು ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಮಾತನಾಡಿದರು.
ರಾಜಕೀಯದಲ್ಲಿ ಹಣ ಮಾಡುವ ಉದ್ದೇಶ ನನ್ನದಲ್ಲ. ಜೆಡಿಎಸ್ ಕಾರ್ಯಕರ್ತರೇ ನನ್ನ ಸಂಪಾದನೆ, ಬೆನ್ನೆಲುಬು. ಜನರಿಗೆ ಒಳ್ಳೆಯದು ಮಾಡಬೇಕು, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕ ಇತಿಹಾಸ ನಿರ್ಮಿಸುವುದು ನನ್ನ ಗುರಿ ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ಚುನಾವಣೆಗಳು ರಾಜಕೀಯದಲ್ಲಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ. ಜನಪರ ಕೆಲಸಗಳು ಮಾಡಲು ಸಾಧ್ಯವಾಗುವುದು ಗ್ರಾಮ ಪಂಚಾಯಿತಿ ಮೂಲಕವೇ. ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗೂಡಲೇಬೇಕಾದ ಸಂದರ್ಭವಿದು. ಒಮ್ಮತದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಲ್ಲಾ 30 ಗ್ರಾಮ ಪಂಚಾಯಿತಿಗಳನ್ನು ಜೆಡಿಎಸ್ ಪರವಾಗಿರುವಂತೆ ನೋಡಿಕೊಳ್ಳಿ. ಆಗಷ್ಟೇ ಕ್ಷೇತ್ರದ ಜನರಿಗೆ ಅನುಕೂಲ ಮಾಡಬಹುದು ಮತ್ತು ಗ್ರಾಮಗಳ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಕಾರಣಾಂತರಗಳಿಂದ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ವಿಧಾನಸಭೆ ಚುನಾವಣೆಯಲ್ಲಿ ಸೋತರೂ, ತಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಅಧಿಕಾರಕ್ಕೆ ತರಲು ಮತ್ತು ಪಕ್ಷವನ್ನು ಬಲಪಡಿಸಲು ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿನ ಅನೇಕ ತೊಂದರೆ, ಅಸಹಕಾರ, ಬ್ರಷ್ಟಾಚಾರಕ್ಕೆ ಬೇಸತ್ತು ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್ ಅವರೊಂದಿಗೆ ಹಲವಾರು ಮಂದಿ ಜೆಡಿಎಸ್ ಸೇರ್ಪಡೆಗೊಳ್ಳುತ್ತಿದ್ದಾರೆ. ಅಭಿವೃದ್ಧಿ ಮತ್ತು ಪಾರದರ್ಶಕ ಆಡಳಿತಕ್ಕಾಗಿ ಜೆಡಿಎಸ್ ಬೆಂಬಲಿಸಿ ಗ್ರಾಮ ಪಂಚಾಯಿತಿ ಚುನಾವಣೆಗೆ ಒಗ್ಗಟ್ಟಿನಿಂದ ಸಜ್ಜಾಗುವಂತೆ ಹೇಳಿದರು.
ಜೆಡಿಎಸ್ ಮುಖಂಡ ಗಂಜಿಗುಂಟೆ ಮೂರ್ತಿ ಮಾತನಾಡಿ, ನಮ್ಮ ಶಿಡ್ಲಘಟ್ಟ ಕ್ಷೇತ್ರದಲ್ಲಿ ಶಾಸಕರ ಬೆಂಬಲಿಗರಿಂದ ಸಾಕಷ್ಟು ಬ್ರಷ್ಟಾಚಾರ ನಡೆಯುತ್ತಿದೆ. ರಸ್ತೆ, ಕೊಳವೆ ಬಾವಿ, ನಿವೇಶನ ಹಂಚಿಕೆ ಎಲ್ಲೆಡೆ ಪರ್ಸೆಂಟೇಜ್ ವ್ಯವಹಾರವಿದೆ. ಲಂಚ ಕೊಡದೆ ಯಾವುದೇ ಕಚೇರಿಯಲ್ಲೂ ಕೆಲಸ ನಡೆಯದಂತಾಗಿದೆ. ಲಂಚ ಮುಕ್ತ ಆಡಳಿತ ವ್ಯವಸ್ಥೆ ನಿರ್ಮಾಣ ಆಗಬೇಕಾದರೆ ಜೆಡಿಎಸ್ ಕಾರ್ಯಕರ್ತರು ಒಗ್ಗೂಡಬೇಕು ಎಂದು ನುಡಿದರು.
ಯರ್ರಹಳ್ಳಿ ವೈ.ಕೆ.ಮಂಜುನಾಥ್, ವೆಂಕಟೇಶ್, ಶ್ರೀನಿವಾಸ್, ನಾರಾಯಣಸ್ವಾಮಿ, ನಾಗರಾಜ್, ಮುನಿಶಾಮಪ್ಪ, ವೆಂಕಟಪ್ಪ, ನಾಗರಾಜ್, ರಾಮಚಂದ್ರ, ರಘುನಾಥ್, ಅಶ್ವಥ್ ನಾರಾಯಣ, ವಿಜಯಕುಮಾರ್, ಅಶೋಕರೆಡ್ಡಿ, ಸುರೇಶ್, ಎಲ್.ಎನ್.ಹೊಸೂರು ಶಿವರಾಜ್, ಅಮರೇಶ್, ವೆಂಕಟೇಶ್, ಕಿಟ್ಟಣ್ಣ, ಸೀನಪ್ಪ, ದಂಡಂಘಟ್ಟ ವೆಂಕಟೇಶ್, ಲಕ್ಷ್ಮೀನಾರಾಯಣ, ಹರೀಶ್, ಕುದುಪಕುಂಟೆ ವೆಂಕಟರೆಡ್ಡಿ, ಶಿವಣ್ಣ, ಸಾಬ್ ಜಾನ್ ಮತ್ತಿತರರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಬಶೆಟ್ಟಹಳ್ಳಿ ವೆಂಕಟೇಶ್, ಚೀಮನಹಳ್ಳಿ ಗೋಪಾಲ್, ತಾದೂರು ರಘು, ಪೂಲಕುಂಟಹಳ್ಳಿ ರಘುನಾಥರೆಡ್ಡಿ, ಲಕ್ಷ್ಮೀನಾರಾಯಣರೆಡ್ಡಿ, ನಾರಾಯಣಸ್ವಾಮಿ, ಶಿವಕುಮಾರ್ ಭಾವರೆಡ್ಡಿ, ಶ್ರೀರಾಮರೆಡ್ಡಿ, ವಿಜಯಭಾವರೆಡ್ಡಿ ಹಾಜರಿದ್ದರು.