Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸ್ವಾಭಿಮಾನಿ ಕಾರ್ಯಕರ್ತರಿದ್ದಾರೆ. ಹಣ ಇನ್ನಿತರೆ ಯಾವುದೆ ಆಮಿಷಗಳಿಗೂ ಬಲಿಯಾಗದ ಇಲ್ಲಿನ ಕಾರ್ಯಕರ್ತರು ಮಾದರಿಯಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆದಂತೆ ಯಡವಟ್ಟು ಈ ಬಾರಿ ಆಗಬಾರದು. ರವಿಕುಮಾರ್‌ರನ್ನು (B. N. Ravikumar) ಆಶೀರ್ವದಿಸಿ ವಿಧಾನಸೌಧಕ್ಕೆ ಕಳುಹಿಸಬೇಕೆಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ತಿಳಿಸಿದರು.
ನಗರದ ಆಶಾ ಕಿರಣ ಅಂಧ ಮಕ್ಕಳ ಶಾಲೆಯ ಆವರಣದಲ್ಲಿ ಸೋಮವಾರ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಅವರ 54 ನೇ ವರ್ಷದ ಹುಟ್ಟು ಹಬ್ಬವನ್ನು (Birthday) ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಅಂಧ ಮಕ್ಕಳಿಂದ ಕೇಕ್ ಕತ್ತರಿಸಿ ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಡಿದ ತಪ್ಪಿಗೆ ಇಡೀ ಕ್ಷೇತ್ರ ಪರಿತಪಿಸುವಂತಾಗಿದೆ. ಅಭಿವೃದ್ಧಿ ಕುಂಠಿತಗೊಂಡಿರುವ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಅತ್ಯಗತ್ಯವಿದೆ. ತಾಲ್ಲೂಕಿನ ಅಭಿವೃದ್ಧಿಗೆ ಚಿಂತಿಸುವವರನ್ನು ಆಯ್ಕೆ ಮಾಡಬೇಕು. ಸರಳ ಸಜ್ಜನಿಕೆಯ ರವಿ ಅಣ್ಣ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಅದು ಅವರಿಗೆ ಇಷ್ಟವೂ ಇಲ್ಲ. ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಅವರ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದರು.
ಜೆಡಿಎಸ್ ಕಾರ್ಯಕರ್ತರು ಶಿಡ್ಲಘಟ್ಟ ನಗರದ ಕೋಟೆಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ಸಂತೆ ಬೀದಿಯಲ್ಲಿನ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಜೆಡಿಎಸ್ ಮುಖಂಡ ರವಿಕುಮಾರ್ ಅವರಿಗೆ ಆಯಸ್ಸು ಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ದೇವಸ್ಥಾನ, ಮಸೀದಿಗಳಲ್ಲಿ ಪ್ರಾರ್ಥನೆ ಪೂಜೆ ಸಲ್ಲಿಸಲಾಯಿತು. ಆಶಾ ಕಿರಣ ಅಂಧ ಮಕ್ಕಳ ಶಾಲಾ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಅಂಧಮಕ್ಕಳಿಗೆ ಸಮವಸ್ತ್ರವನ್ನು ನೀಡಲಾಯಿತು. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ನೀಡಲಾಯಿತು.
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಪಕ್ಷದ ಮುಖಂಡರು ಮೇಲೂರು ಬಿ.ಎನ್. ರವಿಕುಮಾರ್ ಅವರ ಹುಟ್ಟುಹಬ್ಬವನ್ನು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮತ್ತು ಗಿಡ ನೆಡುವ ಮೂಲಕ ಆಚರಿಸಿದರು.
ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾರಾಯಣಸ್ವಾಮಿ, ಹುಜಗೂರು ರಾಮಣ್ಣ, ಆನೂರು ವಿಜಯೇಂದ್ರ, ನಗರಸಭೆ ಸದಸ್ಯರಾದ ವೆಂಕಟಸ್ವಾಮಿ, ಪದ್ಮಿನಿ ಕಿಶನ್, ರೂಪ ನವೀನ್, ಮೇಲೂರು ಕೆ.ಎಸ್.ಮಂಜುನಾಥ್, ಎಸ್.ಎಂ.ರಮೇಶ್, ಆರ್.ಎ.ಉಮೇಶ್, ನಂದುಕಿಶನ್ ಸೇರಿದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.