ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಕೊರೊನಾ ಸೋಂಕಿನ ಎರಡನೇ ಅಲೆಯ ಹಿನ್ನಲೆಯಲ್ಲಿ ಅಲ್ಪಸಂಖ್ಯಾತ ಮುಖಂಡರ ಸಭೆ ನಡೆಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಕೊರೊನಾ ಸೋಂಕಿನ ಎರಡನೇ ಅಲೆಯ ಆತಂಕದ ವಾತಾವರಣವಿರುವುದರಿಂದ ಹಿರಿಯ ನಾಗರಿಕರು ಕೋವಿಡ್ ಲಸಿಕೆ ಪಡೆಯಲು ಸ್ವಪ್ರೇರಣೆಯಿಂದ ಮುಂದೆ ಬರಬೇಕು ಎಂದು ಅವರು ತಿಳಿಸಿದರು.
ಕೋವಿಡ್ ಲಸಿಕೆ ಪಡೆಯುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಇದಕ್ಕೆ ನಾನೇ ಉದಾಹರಣೆ. ಹೀಗಾಗಿ ಜನರು ಲಸಿಕೆ ಪಡೆಯಲು ಯಾವುದೇ ಆತಂಕ ಪಡಬೇಕಿಲ್ಲ. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಕ್ಷೇತ್ರದ ಜನತೆಗೆ ಮನವರಿಕೆ ಮಾಡಿಸಿಕೊಡುವ ಕೆಲಸಕ್ಕೆ ಯುವಜನತೆ ಸ್ವಯಂ ಪ್ರೇರಿತವಾಗಿ ಮುಂದಾಗಬೇಕು ಎಂದರು.
ಪ್ರತಿಯೊಬ್ಬರು ಇದು ನಮ್ಮ ಊರು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಊರು ಎಂದರೆ ಒಬ್ಬರಿಗೊಬ್ಬರ ನಡುವೆ ಆಂತರಿಕ ಸಂಬಂಧಗಳಿರುತ್ತವೆ. ಹಾಗಾಗಿ ಯಾರಿಗೋ ಬಂದರೆ ನಮಗೇನು? ಎಂಬ ಧೋರಣೆ ಬಿಟ್ಟು ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಬಂದು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಬೇಕು ಎಂದರು.
ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ, ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್, ವೈದ್ಯರು ಸೇರಿದಂತೆ ನಾಗರಿಕರು ಲಸಿಕೆ ಪಡೆದಿದ್ದಾರೆ, ಲಸಿಕೆ ಕುರಿತ ವದಂತಿಗಳಿಗೆ ಜನ ಕಿವಿಗೊಡಬಾರದು. ಲಸಿಕೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾದರೆ ಮಾತ್ರ ಪ್ರಯೋಜನ. ಲಸಿಕೆ ಪಡೆಯುವುದು ಹಾಗೂ ಅಂತರ ಕಾಯ್ದುಕೊಳ್ಳವುದು, ಮಾಸ್ಕ್ ಧರಿಸುವುದರಿಂದ ಕೊರೋನಾ ತಡೆಗಟ್ಟಬಹುದು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, “ಕೊರೊನಾ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿದೆ. ಜನತೆ ಕೋವಿಡ್ ಮಾರ್ಗಸೂಚಿ ಪಾಲನೆ ನಿರ್ಲಕ್ಷಿಸಬಾರದು. ವಿಜ್ಞಾನಿಗಳ ಸಂಶೋಧನೆಯ ಫಲವಾಗಿ ಲಸಿಕೆ ಬಿಡುಗಡೆಯಾಗಿದೆ. ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ನಂತರವಷ್ಟೇ ಲಸಿಕೆ ನೀಡಲಾಗುತ್ತಿದೆ. ನಗರದ ಒಟ್ಟು 60 ಸಾವಿರ ಜನಸಂಖ್ಯೆಯಲ್ಲಿ ಶೇ 25 ರಷ್ಟಿರುವ 45 ವರ್ಷ ಮೇಲ್ಪಟ್ಟ ನಾಗರಿಕರಲ್ಲಿ ಈವರೆಗೂ ಕೇವಲ ಮೂರು ಸಾವಿರದಷ್ಟು ಜನ ಮಾತ್ರ ಲಸಿಕೆ ಹಾಕಿಸಿಕೊಂಡಿರುತ್ತಾರೆ. ಕೂಡಲೇ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಬಂದು ಲಸಿಕೆ ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಶ್ರೀನಿವಾಸ್, ಜಾಮಿಯಾ ಮಸೀದಿ ಅಧ್ಯಕ್ಷ ರಫೀಕ್ ಸಾಬ್, ಮುಖಂಡರಾದ ಶಫೀಉಲ್ಲಾ, ಅಬ್ದುಲ್ ಸಲೀಂ ಸಾಬ್, ಇರ್ಫಾನ್ ಅಹಮ್ಮದ್, ಮುಸ್ತು, ಅಕ್ರಂಪಾಷ, ರಹಮತ್ ಅಲಿ, ಬಾಬಾ ಹಾಜರಿದ್ದರು.