Seegehalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಶೀಗೆಹಳ್ಳಿ ಗ್ರಾಮದ ಕೆಲವಾರು ಮನೆತನದವರಿಂದ ಸುಮಾರು 5 ತಲೆಮಾರುಗಳಿಂದ 3 ವರ್ಷಕೊಮ್ಮೆ ಶ್ರೀ ಮಸಿಕಟ್ಟೆ ಮಾರಮ್ಮ ದೇವಿಯ (Masikatte Maramma Devi) ದೀಪಾರಾಧನೆ ಹಾಗೂ ಜಾತ್ರಾ ಮಹೋತ್ಸವನ್ನು ಆಚರಣೆ ಮಾಡಿ ಕೊಂಡು ಬರುತ್ತಿದ್ದು ಈ ವರ್ಷ ಕೂಡ ವಿಜೃಂಭಣೆಯಿಂದ ನಡೆಯಿತು .
ಗ್ರಾಮದ ಪ್ರಮುಖ ಬೀದಿಗಳಲ್ಲಿ ದೀಪಗಳನ್ನು ಹೊತ್ತ ಮಹಿಳೆಯರು ಸಂಪ್ರದಾಯದಂತೆ ನೆಲದ ಮೇಲೆ ಹಾಸಿದ ಸೀರೆ ಮೇಲೆ ನಡೆದು ಗ್ರಾಮದ ಹೊರಗಡೆ ಇರುವ ಮಸಿಕಟ್ಟೆ ಮಾರಮ್ಮ ದೇವಿಗೆ ದೀಪಗಳನ್ನು ಬೆಳಗುವ ಮೂಲಕ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸೊಣ್ಣಪ್ಪ, “ನಮ್ಮ ಹಿರಿಯರು ಎತ್ತುಗಳ ವ್ಯಾಪಾರಕ್ಕೆಂದು ಗಡಿ ಸೀಮೆಗೆ ಹೋಗಿ ಹಿಂತಿರುವಾಗ ದಾರಿ ಮಧ್ಯೆ ಅಶರೀರ ವಾಣಿಯೊಂದು ಕೇಳಿಸಿ ಗ್ರಾಮದ ಬಯ್ಯಣ್ಣ ಕುಂಟೆ ಬಳಿ ಇರುವ ಮರದಲ್ಲಿ ನಾನು ನಿಮ್ಮ ಮನೆತನದ ಕುಲದೇವತೆಯಾಗಿ ನೆಲೆಸುತ್ತೇನೆ, ನೀವು ಮಾಡಿದ ದೈವ ಕಾರ್ಯದಲ್ಲಿ ಮೊದಲ ಪೂಜೆ ನನಗಿರಲಿ ಎಂದು ಹೇಳಿ ಅದೇ ಮರದಲ್ಲಿ ದೇವಿ ನೆಲಸಿದ್ದಾಳೆ ಎಂಬ ನಂಬಿಕೆಯಿದೆ. ಅಂದಿನಿಂದ ಇಂದಿನವರೆಗೂ ನಮ್ಮ ಮನೆತನಗಳಲ್ಲಿ ಮೊದಲ ಪೂಜೆ ಈ ದೇವಿಗೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಕ್ಕಲಪ್ಪ, ಸೊಣ್ಣೆಗೌಡ, ವೇಣು ಗೋಪಾಲ್, ಶ್ರೀರಾಮ ರೆಡ್ಡಿ, ಚಂದ್ರು, ರಾಮ ರೆಡ್ಡಿ, ಕುಮಾರ್, ದೇವರಾಜ್, ಗಜೇಂದ್ರ, ಲೋಕೇಶ್, ರಾಜು, ಸಂದೀಪ್ ಹಾಜರಿದ್ದರು.