Home News ಮಂತ್ರ ಮಾಂಗಲ್ಯದ ವಿವಾಹ

ಮಂತ್ರ ಮಾಂಗಲ್ಯದ ವಿವಾಹ

0

“ಒಲುಮೆ ಒಂದು ದಿವ್ಯರಕ್ಷೆ ಇಹ ಸಮಸ್ಯೆಗೆ, ಮದುವೆ ಅದಕೆ ಮಧುರದೀಕ್ಷೆ ಗೃಹತಪಸ್ಯೆಗೆ… ಶ್ರೀಯುತ ಮುರಳಿ ಮೋಹನ್ ಎಂ ಎಂಬ ವರನಾದ ನೀವು, ಶ್ರೀಮತಿ ಶ್ರೀದೇವಿ ಎಂ ಎಂಬ ವಧುವಾದ ನೀವು ಈ ದಿನದಂದು ದಂಪತಿಗಳೆಂಧು ಘೋಷಿಸುತ್ತೇವೆ” ಎಂದು ಹಿರಿಯರೊಬ್ಬರು ಹೇಳುತ್ತಿದ್ದಂತೆ ನೆರೆದಿದ್ದ ಕೆಲವೇ ಮಂದಿ, ತಾಳಿ ಕಟ್ಟಿದ ನವ ದಂಪತಿಗೆ ಬಿಡಿ ಹೂವನ್ನು ಹಾಕಿ ಆಶೀರ್ವದಿಸಿದರು.
ತಾಲ್ಲೂಕಿನ ಸದ್ದಹಳ್ಳಿ ಗ್ರಾಮದ ಬಂಡೆಮ್ಮ ದೇವಾಲಯದಲ್ಲಿ ಸೋಮವಾರ ಹೊಸಕೋಟೆ ತಾಲ್ಲೂಕಿನ ಶಿಕ್ಷಕ ಮುರುಳಿ ಮತ್ತು ಶಿಕ್ಷಕಿ ಶ್ರೀದೇವಿ ಸರಳವಾಗಿ ಕುವೆಂಪು ರವರ ಮಂತ್ರಮಾಂಗಲ್ಯ ವಿವಾಹ ಸಂಹಿತೆಯಂತೆ ಮದುವೆಯಾದರು.
ಎರಡೂ ಕುಟುಂಬಗಳ ಬೆರಳೆಣಿಕೆಯಷ್ಟು ಮಂದಿ ಮಾತ್ರವಿದ್ದರು. ಅಕ್ಷತೆ, ಹಾಲೆರೆಯುವುದನ್ನು ಸಹ ಮಾಡಲಿಲ್ಲ. ಹಿರಿಯರೊಬ್ಬರು ಕುವೆಂಪು ರವರ ಮಂತ್ರಮಾಂಗಲ್ಯ ಪುಸ್ತಕದಿಂದ ಮಂತ್ರಗಳನ್ನು ಮತ್ತು ಹಲವಾರು ಸನ್ನಡತೆಗಳ ಸಾಲುಗಳನ್ನು ಓದಿ ಗಂಡು ಹೆಣ್ಣಿನ ಕೈಲಿ ಓದಿಸಿದರು. ಗಂಡು – ಹೆಣ್ಣು ಪರಸ್ಪರ ಹೂವಿನ ಹಾರಗಳನ್ನು ಬದಲಾಯಿಸಿಕೊಂಡು, ಮಾಂಗಲ್ಯಧಾರಣೆಯ ಪವಿತ್ರ ಕಾರ್ಯವನ್ನು ನೆರವೇರಿಸಿದರು. ತಂದೆ – ತಾಯಿಯರು ಅವರಿಗೆ ಆಶಿರ್ವದಿಸಿದರು. ಹಾಗೆಯೇ ಹಿರಿಯರು, ಮದುವೆ ಬಂದಂತಹ ಬಾಂಧವರು, ಗೆಳೆಯರು ಹೂವನ್ನು ಎರಚಿ ಶುಭಾಶಯ ಕೋರಿದರು.
“ಕುವೆಂಪು ಅವರ ಪ್ರಭಾವ ನನ್ನ ಮೇಲೆ ಇತ್ತು. ಜತೆಗೆ ಸರಳವಾಗಿ ವಿವಾಹವಾಗಬೇಕೆಂಬ ಆಸೆಯೂ ಇತ್ತು. ಮದುವೆ ಖಾಸಗಿ ವಿಚಾರದಂತೆ ಅದೊಂದು ಭಾವಾನಾತ್ಮಕ ವಿಚಾರ. ಕವಿ ಕುವೆಂಪು ಅವರು ಜನರು ದುಂದುವೆಚ್ಚ, ಸಾಲಬಾಧೆ, ಪುರೋಹಿತಶಾಹಿ ಕಂದಾಚಾರ ಮುಂತಾದ ಎಲ್ಲಾ ಮೌಢ್ಯಗಳನ್ನೂ, ಒಣ ಪ್ರತಿಷ್ಠೆಗಳನ್ನೂ ಬದಿಗಿಟ್ಟು ಸರಳವಾಗಿ ಮದುವೆ ಮಾಡಿಕೊಂಡು ಬದುಕಬೇಕೆಂದು ಬಯಸಿದ್ದರು. ನನ್ನ ಆಶಯಕ್ಕೆ ನನ್ನ ಶ್ರೀಮತಿ ಹಾಗೂ ಎರಡೂ ಕುಟುಂಬದವರು ಸಮ್ಮತಿಸಿದರು” ಎಂದು ವರ ಮೋಹನ್ ತಿಳಿಸಿದರು.