Sidlaghatta : ಮಣಿಪುರದಲ್ಲಿ ಶಾಂತಿ ಕಾಪಾಡಲು ಮೋದಿ ಅವರು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದು, ಮಣಿಪುರದ ಇಂದಿನ ಸ್ಥಿತಿಗೆ ವಿಪಕ್ಷಗಳ ನಾಯಕರ ಅಸಹಕಾರ ಕಾರಣವಾಗಿದೆ ಎಂದು ಕೋಲಾರ ಸಂಸದ ಮುನಿಸ್ವಾಮಿ ಆರೋಪಿಸಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿನ ಗ್ರಾಮಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತರಿಗೆ ಶಿಡ್ಲಘಟ್ಟದಲ್ಲಿನ ಬಿಜೆಪಿಯ ಸೇವಾ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮೋದಿ ಅವರು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಿದ್ದಾರೆ. ಆದರೆ ವಿಪಕ್ಷಗಳಿಗೆ ಮಣಿಪುರದಲ್ಲಿ ಶಾಂತಿ ನೆಲೆಸುವುದು ಬೇಕಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಗ್ಯಾರಂಟಿ ಜಾರಿಗಳಿಗೆ ಹಣವನ್ನು ಹೊಂದಿಸಲು ಸಿದ್ದರಾಮಯ್ಯ ಅವರು ಹೆಣಗಾಡುತ್ತಿದ್ದಾರೆ. ಇದರಿಂದಾಗಿ ಬೇರೆ ಯಾವುದೆ ಅಭಿವೃದ್ದಿಗಳು ಆಗುತ್ತಿಲ್ಲ, ಸಾಕಷ್ಟು ಇಲಾಖೆಗಳಲ್ಲಿ ನೌಕರರಿಗೆ ಇನ್ನೂ ವೇತನದ ಹಣ ಬಿಡುಗಡೆ ಆಗಿಲ್ಲ ಎಂದು ಆಪಾದಿಸಿದರು.
ಜಾತಿ ಜಾತಿ ನಡುವೆ ಬೆಂಕಿ ಇಡುವುದು ಅದನ್ನು ಆರಿಸುವುದು ಕಾಂಗ್ರೆಸ್‌ಗೆ ಹೊಸದೇನಲ್ಲ ಹಾಗೆಯೆ ಬಿಬಿಎಂಪಿ ಕಟ್ಟಡದಲ್ಲಿ ಕಾಣಿಸಿಕೊಂಡು ಬೆಂಕಿಯ ಹಿಂದೆ ಅನುಮಾನಗಳು ಕಾಡುತ್ತಿವೆ ಎಂದರು.
ಗುತ್ತಿಗೆದಾರರಿಂದ ಕಮೀಷನ್ ಹಣ ಕೇಳಿಲ್ಲ ಎಂದು ಉಪ ಮುಖ್ಯಮಂತ್ರಿಗಳು ಅವರು ನಂಬಿರುವ ಅಜ್ಜಯ್ಯನ ಮೇಲೆ ಆಣೆ ಮಾಡಿ ಹೇಳಲಿ ನೋಡೋಣ ಎಂದು ಸವಾಲು ಎಸೆದರು.
ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಶಿಡ್ಲಘಟ್ಟ ಕ್ಷೇತ್ರದಲ್ಲಿ ಮೂರು ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಬಿಜೆಪಿ ಬೆಂಬಲಿತರು ಅಧಿಕಾರ ಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಿಸುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದರು.
ಗ್ರಾಮ ಪಂಚಾಯಿತಿಗಳ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಎಂ.ರಾಜಣ್ಣ, ಸೀಕಲ್ ರಾಮಚಂದ್ರಗೌಡ, ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ಕನಕಪ್ರಸಾದ್, ತ್ರಿವೇಣಿ, ಆಂಜನೇಯಗೌಡ, ಮಳಮಾಚನಹಳ್ಳಿ ರವಿ ಹಾಜರಿದ್ದರು.