Appegowdanahalli, Sidlaghatta : ಪ್ರತಿವರ್ಷ ಮಾವಿನ ಕಟಾವು ಮುಗಿದ ನಂತರ ಗಿಡಗಳ ಅಪ್ರಯೋಜಕ ರೆಂಬೆ, ಕೊಂಬೆಗಳನ್ನು ಕತ್ತರಿಸಿ ಗಾಳಿ ಹಾಗು ಸೂರ್ಯನ ಬೆಳಕು ಯಥೇಚ್ಚವಾಗಿ ಬೀಳುವಂತೆ ಮಾಡಿದ್ದೇ ಆದಲ್ಲಿ ಉತ್ತಮ ಗುಣಮಟ್ಟದ ಹಣ್ಣು ಹಾಗೂ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಕೃಷಿ ವಿಜ್ಷಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಆರ್.ಪ್ರವೀಣ್‌ಕುಮಾರ್ ತೀಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಮಾವು ಬೆಳೆಗಾರ ವೆಂಕಟರೆಡ್ಡಿ ಅವರ ಮಾವಿನ ತೋಟದಲ್ಲಿ ಶುಕ್ರವಾರ ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗಿಡದ ಒಣಗಿದ ಹಾಗೂ ರೋಗಗ್ರಸ್ಥ ಭಾಗಗಳನ್ನು ಕತ್ತರಿಸುವುದರಿಂದ ಗಿಡವು ಆರೋಗ್ಯಕರವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಗಿಡದಲ್ಲಿ ಹೂ ಬಿಡುವ ಒಂದು ತಿಂಗಳು ಮುಂಚಿತವಾಗಿ ಸಸ್ಯ ಪ್ರಚೋದಕವಾದ ಪ್ಲಾನೋಫಿಕ್ಸ್ ಸಿಂಪಡಿಸಬೇಕು. ನಂತರ ಲಘು ಪೋಷಕಾಂಶಗಳ ಮಿಶ್ರಣವನ್ನು ಸಿಂಪಡಣೆ ಮಾಡಿದಲ್ಲಿ ಶೇ 20 ರಿಂದ 30 ರಷ್ಟು ಹೆಚ್ಚಿನ ಕಾಯಿ ಕಟ್ಟುವಿಕೆಯನ್ನು ಕಾಣಬಹುದು ಎಂದರು.
ಮಾವಿನ ಸಮಗ್ರ ಬೆಳೆ ನಿರ್ವಹಣೆಯ ನೂತನ ತಾಂತ್ರಿಕತೆಗಳಾದಂತಹ ಚಾಟನಿ ಮಹತ್ವ, ಪ್ಲಾನೋಫಿಕ್ಸ್ ಬಳಕೆ, ಮಾವು ಸ್ಪೆಷಲ್ (ಲಘು ಪೋಷಕಾಂಶಗಳ ಮಿಶ್ರಣ) ಬಳಕೆ, ಬೂದಿ ರೋಗ, ಜಿಬ್ಬು ರೋಗ ಮತ್ತು ಜಿಗಿಹುಳು ನಿರ್ವಹಣೆಗೆ ನೂತನ ತಾಂತ್ರಿಕತೆಗಳು, ಹಣ್ಣಿನ ನೊಣದ ನಿರ್ವಹಣೆಗೆ ಮೋಹಕ ಬಲೆಗಳ ಅಳವಡಿಕೆಯ ಬಗ್ಗೆ ಮಾವು ಬೆಳೆಗಾರರಾದ ವೆಂಕಟರೆಡ್ಡಿ ಹಾಗೂ ಪ್ರಗತಿಪರ ರೈತ ಗಿರೀಶ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಸ್ಯರೋಗಶಾಸ್ತ್ರದ ವಿಜ್ಞಾನಿ ಡಾ.ಬಿ.ಸ್ವಾತಿ ಕೀಟ ನಿರ್ವಹಣೆ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ತಿಳಿಸಿದರೆ ವಿಜ್ಞಾನಿ ಡಾ.ವಿಶ್ವನಾಥ್ ಜೈವಿಕ ಗೊಬ್ಬರಗಳ ಉಪಯೋಗ ಮತ್ತು ಮಾವಿನಲ್ಲಿ ಹಸಿರೆಲೆ ಗೊಬ್ಬರ ಗಿಡದ ಬಳಕೆಯಿಂದ ತೋಟದಲ್ಲಿ ಕಳೆ ನಿರ್ವಹಣೆ ಮತ್ತು ಮಣ್ಣಿನ ಪೌಷ್ಟಿಕತೆಯ ಬಗ್ಗೆ ತಿಳಿಸಿದರು. ವಿಜ್ಞಾನಿ ಡಾ.ಕೆ.ಸಂಧ್ಯಾ ಮಣ್ಣಿನ ಮಹತ್ವ ಮತ್ತು ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಮಾವು ಬೆಳೆಗಾರರಾದ ವೆಂಕಟರೆಡ್ಡಿ, ಪ್ರಗತಿಪರ ರೈತರಾದ ಎ.ಎಂ.ತ್ಯಾಗರಾಜ್, ಗಿರೀಶ್ ಸೇರಿದಂತೆ ಸುಮಾರು 30 ರೈತರು ಪಾಲ್ಗೊಂಡಿದ್ದರು.