ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಶ್ರೀ ಮಳ್ಳೂರಾಂಬ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಪ್ರಕಾಶ್‌ಕುಮಾರ್ ಮಾತನಾಡಿದರು.
ಸ್ವಚ್ಛತೆ ಪ್ರತಿಯೊಬ್ಬ ವ್ಯಕ್ತಿಯ ಸ್ವಾಭಿಮಾನದ ಸಂಕೇತವಾಗಬೇಕು ಎಂದು ಅವರು ಹೇಳಿದರು.
ಮನುಷ್ಯ ನೆಮ್ಮದಿಗಾಗಿ ಶ್ರದ್ಧಾ ಭಕ್ತಿಯಿಂದ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ದೇವಸ್ಥಾನದಲ್ಲಿನ ಅಶುಚಿತ್ವದಿಂದ ಅಲ್ಲಿ ಭಕ್ತಿ ಭಾವಗಳು ಮೂಡದೇ ಮತ್ತಷ್ಟು ಮನಸ್ಸಿನ ನೆಮ್ಮದಿ ಹಾಳಾಗುತ್ತದೆ. ಆದ್ದರಿಂದ ನಮ್ಮ ನಮ್ಮ ಗ್ರಾಮಗಳ ದೇವಾಲಯಗಳನ್ನು ಸ್ವಚ್ಚವಾಗಿಟ್ಟುಕೊಂಡರೆ ಅದೇ ಧರ್ಮಸ್ಥಳ ಅದೇ ಮಂಜುನಾಥ ಸ್ವಾಮಿ ಸನ್ನಿಧಿಯಾಗುತ್ತದೆ ಎಂದರು.
ಕಳೆದ ಕೆಲ ವರ್ಷಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಪ್ರತಿವರ್ಷ ಜನವರಿ ತಿಂಗಳಲ್ಲಿ ಹಲವಾರು ಧಾರ್ಮಿಕ ಕೇಂದ್ರಗಳ ಸ್ವಚ್ಚತೆ ಕಾರ್ಯ ಕೈಗೊಳ್ಳುತ್ತಿದ್ದು ಈ ವರ್ಷವೂ ತಾಲ್ಲೂಕಿನ ವಿವಿಧ ಗ್ರಾಮಗಳ ಧಾರ್ಮಿಕ ಕೇಂದ್ರಗಳ ಸ್ವಚ್ಚತೆಗೆ ಮುಂದಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ರಮಾಕಾಂತ್, ಮೇಲ್ವಿಚಾರಕಿ ಲಕ್ಷ್ಮಿ, ವಕೀಲ ಮುನಿರಾಜು, ಗ್ರಾಮ ಪಂಚಾಯತಿ ಸದಸ್ಯ ರಾಜಣ್ಣ, ಕಾರ್ಯದರ್ಶಿ ಗೋಪಾಲ್, ಗ್ರಾಮ ಸಂಪನ್ಮೂಲ ವ್ಯಕ್ತಿ ಚನ್ನಕೃಷ್ಣ, ವೇಣುಗೋಪಾಲ್, ಸೇವಾ ಪ್ರತಿನಿಧಿ ಅರ್ಷಿಯ, ಅನಿತಾ ಹಾಜರಿದ್ದರು.