Mallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿಯ ಮುತ್ತೂರು ಗ್ರಾಮದಲ್ಲಿ ಸೋಮವಾರ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ FES ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಬರಡು ರಾಸುಗಳ ಚಿಕಿತ್ಸಾ ಶಿಬಿರವನ್ನು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಕೆ.ರಮೇಶ್ ಅವರು ಗೋಪೂಜೆಯೊಂದಿಗೆ ಪ್ರಾರಂಭಿಸಿದರು.
ನಮ್ಮ ಮನೆಯಲ್ಲಿ ಜಾನುವಾರುಗಳಿದ್ದರೆ ಅದು ನಮ್ಮ ಪೂರ್ವ ಜನ್ಮದ ಪುಣ್ಯದ ಫಲ. ಅವುಗಳನ್ನು ಕ್ರಮಬದ್ಧವಾಗಿ ಸಾಕಬೇಕು, ಇಲ್ಲದಿದ್ದರೆ ನಾವು ಪಾಪದ ಮೂಟೆಯನ್ನು ಕಟ್ಟಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ನಮ್ಮ ಮನೆಯಲ್ಲಿ ಇರುವ ಹಸುಗಳು ತಮ್ಮ ಜೀವನ ಉದ್ದಕ್ಕೂ ನಮಗೆ ಹಲವಾರು ಫಲಗಳು ಮತ್ತು ಸೇವೆಗಳನ್ನು ನೀಡುತ್ತಾ ತಮ್ಮ ಜೀವನವನ್ನು ಕಳೆಯುತ್ತವೆ. ಅವುಗಳನ್ನು ಸರಿಯಾದ ಕ್ರಮದಲ್ಲಿ ಸಾಕುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಪರಿಸರ ಭದ್ರತೆ ಪ್ರತಿಷ್ಠಾನ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಎನ್.ರಮೇಶ್ ಮಾತನಾಡಿ, ನಮ್ಮ ಪೂರ್ವಜರೆಲ್ಲರೂ ಪಶುಪಾಲನೆಯನ್ನು ಸಾಮೂಹಿಕ ಆಸ್ತಿಗಳಾದ ಗೋಮಾಳ, ಗುಂಡುತೋಪು, ಕೆರೆ, ಕುಂಟೆಗಳ ಹತ್ತಿರ ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಈಗ ಅವುಗಳನ್ನೆಲ್ಲಾ ಒತ್ತುವರಿ ಮಾಡಿ ನಾಶ ಮಾಡಿ, ಇಂದು ನಮ್ಮ ಮನೆಗಳ ಹತ್ತಿರವೇ ಹಸು ಮತ್ತು ಕುರಿ ಸಾಕಾಣಿಕೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಆತಂಕವನ್ನು ವ್ಯಕ್ತಪಡಿಸಿದರು.
ಮಳ್ಳೂರು ಪಶು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ದಿವಂಗತ ಡಾ.ಮುನಿರಾಜು ಅವರಿಗೆ ಶ್ರದ್ಧಾಂಜಲಿಯಲ್ಲಿ ಸಲ್ಲಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬೈರೇಗೌಡ, ಉಪಾಧ್ಯಕ್ಷೆ ಪವಿತ್ರಾ, ಎಂ.ಪಿ.ಸಿ.ಎಸ್ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಪಾರ್ಥಸಾರಥಿ, ಉಪಾಧ್ಯಕ್ಷ ಕೆಂಪೇಗೌಡ, ಪಶು ವೈದ್ಯರಾದ ಡಾ.ಅರುಣ್ ಕುಮಾರ್, ಡಾ.ಪ್ರಶಾಂತ್, ಡಾ.ಮಂಜೇಶ್, ಡಾ.ಮುನಿಸ್ವಾಮಿಗೌಡ, ಡಾ.ಪುಷ್ಪ, ಡಾ.ಚಂದನಾ, ಡಾ.ಪ್ರಮೀಳ, ಮೇಲ್ವಿಚಾರಕ ಉಮೇಶ್, ಸೂರ್ಯನಾರಾಯಣಪ್ಪ ಹಾಜರಿದ್ದರು.