ತಾಲ್ಲೂಕಿನ ಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಸುಂಧರೆ ಇಕೋ ಕ್ಲಬ್ ವತಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಶಕುಂತಲಮ್ಮ ಮಾತನಾಡಿದರು.
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಮಾನವನ ಜೀವನ ನಿಸರ್ಗ ಸಹಜವಿರಬೇಕು ಹೊರತು ನಿಸರ್ಗದ ವಿರುದ್ಧ ಇರಬಾರದು ಎಂದು ಅವರು ತಿಳಿಸಿದರು.
ಬದುಕಿನ ಅವಿಭಾಜ್ಯ ಅಂಗವಾಗಿರುವ ಪರಿಸರವನ್ನು ಉಳಿಸುವ ಕಾರ್ಯ ಸಾಮಾಜಿಕ ಜವಾಬ್ದಾರಿಯಾಗಬೇಕಿದೆ. ನೆಲ-ಜಲ, ಅರಣ್ಯ, ವನ್ಯ ಜೀವಿಗಳು ಹಾಗೂ ಜೀವ ವೈವಿಧ್ಯಗಳೊಂದಿಗೆ ಪರಿಸರವನ್ನು ಸಂರಕ್ಷಿಸದೆ ನಿರ್ಲಕ್ಷ್ಯ ವಹಿಸಿದಲ್ಲಿ ಭವಿಷ್ಯತ್ತಿನಲ್ಲಿ ತೀವ್ರ ಗಂಡಾಂತರ ಪರಿಸ್ಥಿತಿ ಎದುರಿಸ ಬೇಕಾಗುತ್ತದೆ. ಪರಿಸರದ ಮೇಲೆ ಮಾನವ ಎಸಗುತ್ತಿರುವ ಅಪಾಯವನ್ನು ತಡೆಗಟ್ಟದಿದ್ದಲ್ಲಿ ಭವಿಷ್ಯದಲ್ಲಿ ಶುದ್ಧ ಗಾಳಿ, ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಛ ಪರಿಸರದ ಸಮಸ್ಯೆ ಎದುರಿಸಬೇಕಿದೆ. ಈ ದಿಸೆಯಲ್ಲಿ ನಾವು ಪರಿಸರಕ್ಕೆ ಯಾವದೇ ಧಕ್ಕೆಯನ್ನುಂಟು ಮಾಡದೆ ಪರಿಸರ ಸಂರಕ್ಷಿಸಬೇಕು ಎಂದರು.
ಒಣ ಕಸ, ಹಸಿ ಕಸ ಮತ್ತು ವಿಷಕಾರಿ ಕಸ ಎಂಬುದಾಗಿ ಮೂರು ರೀತಿಯಲ್ಲಿ ಕಸ ವಿಂಗಡಣೆ ಮಾಡುವುದನ್ನು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಡಲಾಯಿತು. ವಾಯುಮಾಲಿನ್ಯ ತಡೆಗಟ್ಟಲು ಗಿಡಗಳನ್ನು ನೆಡುವುದು, ವ್ಯರ್ಥ ನೀರನ್ನು ಗಿಡಗಳಿಗೆ ಹರಿಸುವುದು, ನೀರನ್ನು ಕಡಿಮೆ ಬಳಸುವುದು, ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವುದು, ಪ್ಲಾಸ್ಟಿಕ್ ಬಳಸಬಾರದು ಎಂಬುದಾಗಿ ಮಕಳಿಗೆ ವಿವರಿಸಿದ ಶಿಕ್ಷಕರು, ಮಕ್ಕಳೊಂದಿಗೆ ಗಿಡಗಳನ್ನು ನೆಟ್ಟರು. ವಿದ್ಯಾರ್ಥಿಗಳಿಗೆ ಪರಿಸರಕ್ಕೆ ಸಂಬಂಧಿಸಿದಂತೆ ಚಿತ್ರಕಲೆ ಮೂಲಕ ಜಾಗೃತಿ ಮೂಡಿಸಿ, ಬಹುಮಾನಗಳನ್ನು ನೀಡಲಾಯಿತು.
ಶಿಕ್ಷಕಿಯರಾದ ಶೋಭಾ, ಅರುಣಾ, ಇಂದುಮತಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಮುನಿಕೃಷ್ಣಪ್ಪ ಹಾಜರಿದ್ದರು.