ಚಿಂದಿ ಪೇಪರ್ ಹಾಗೂ ಪ್ಲಾಸ್ಟಿಕ್ ಆಯುವ ಸೋಗಿನಲ್ಲಿ ಬಂದ ಮಹಿಳೆಯರಿಬ್ಬರು ಮನೆ ಕಳ್ಳತನ ನಡೆಸಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದೀಗ ಪೊಲೀಸರ ಬಂದಿಯಾಗಿದ್ದಾರೆ. ಇವರ ಹೆಸರು, ವಿಳಾಸ ಹಾಗೂ ಈ ಹಿಂದೆ ನಡೆಸಿದ ಕೃತ್ಯಗಳು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿಗೆ ಪೇಪರ್ ಹಾಗೂ ಪ್ಲಾಸ್ಟಿಕ್ ಆಯುವ ನೆಪದಲ್ಲಿ ಬಂದಿದ್ದ ಇಬ್ಬರು ಮಹಿಳೆಯರು ಮನೆಯೊಂದರಲ್ಲಿ ಯಾರೂ ಇಲ್ಲದೆ ಬೀಗ ಹಾಕಿದ್ದನ್ನು ಖಚಿತಪಡಿಸಿಕೊಂಡು ಆ ಎರಡೂ ಮನೆಗಳ ಬೀಗ ಮುರಿದು ಕಳ್ಳತನ ನಡೆಸಿದ್ದಾರೆ. ಮನೆಯಲ್ಲಿನ ಬೀರುವಿನ ಬೀಗ ಮುರಿದು ಚಿನ್ನಾಭರಣ ದೋಚಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಮನೆಯ ಮಾಲೀಕ ವೆಂಕಟೇಶಪ್ಪ ಮನೆಗೆ ಬಂದಿದ್ದು ಮನೆಯ ಬೀಗ ಮುರಿದು ಮನೆಯೊಳಗಿನ ಬೀರುವಿನ ಬಾಗಿಲು ಕಿತ್ತು ಬಟ್ಟೆ ಬರೆ ಎಳದು ಹಾಕಿ ಚಿನ್ನಾಭರಣ ದೋಚಿರುವುದನ್ನು ಕಂಡ ದಂಗಾಗಿ, ಅಕ್ಕ ಪಕ್ಕದ ಮನೆಯವರನ್ನು ಮನೆ ಬಳಿ ಯಾರಾದರೂ ಬಂದಿದ್ದರಾ ಎಂದು ವಿಚಾರಿಸಿದ್ದಾರೆ.
ಯಾರೋ ಚಿಂದಿ ಪೇಪರ್ ಆಯುವವರು ಇಲ್ಲಿ ಸುತ್ತಾಡುತ್ತಿದ್ದರು ಎಂಬ ವಿಚಾರ ತಿಳಿದು ತಕ್ಷಣವೇ ತಮ್ಮ ಸ್ನೇಹಿತರೊಂದಿಗೆ ಬೈಕ್ಗಳಲ್ಲಿ ಶಿಡ್ಲಘಟ್ಟದತ್ತ ಬಂದಿದ್ದಾರೆ. ಮಳಮಾಚನಹಳ್ಳಿಯಿಂದ ಶಿಡ್ಲಘಟ್ಟಕ್ಕೆ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಚಿಂದಿ ಆಯುವ ಮಹಿಳೆಯರನ್ನು ಬೋದಗೂರು ಬಳಿ ತಡೆದಿದ್ದಾರೆ
ತಕ್ಷಣ ಆ ಇಬ್ಬರೂ ಮಹಿಳೆಯರು ಚಿನ್ನಾಭರಣ ಇದ್ದ ಕೈ ಚೀಲವನ್ನು ಅಲ್ಲಿಯೆ ಬಿಸಾಡಿ ಓಟ ಕೀಳಲಾರಂಭಿಸಿದ್ದಾರೆ. ಆದರೂ ಅವರನ್ನು ಹಿಡಿದು ಗ್ರಾಮಕ್ಕೆ ಕರೆದೊಯ್ದಿದ್ದು ಎರಡು ಮನೆಗಳಲ್ಲಿ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.
ಆದರೆ ಹೆಸರು, ಊರನ್ನು ಒಂದೊಂದು ಸಲ ಒಂದೊಂದು ರೀತಿ ಹೇಳುತ್ತಿದ್ದು ಹೆಸರು ವಿಳಾಸ ಖಚಿತವಾಗಿಲ್ಲ. ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ ಅವರ ವಶಕ್ಕೆ ನೀಡಲಾಗಿದೆ. ತನಿಖೆಯಿಂದಷ್ಟೆ ಇನ್ನಷ್ಟು ವಿಚಾರ ಬಯಲಾಗಬೇಕಿದೆ.