Sidlaghatta : ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಯವರ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಯವರ ಜಯಂತಿಯ (Mahatma Gandhi & Lal bahadur Shastri Jayanti) ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಅವರು ಮಾತನಾಡಿದರು
ಕಟ್ಟಕಡೆಯ ಭಾರತೀಯನಿಗೂ ಸಮಾನತೆ, ಮೂಲಭೂತ ಸೌಲಭ್ಯ ಹಾಗೂ ಸಾಮಾಜಿಕ ನೆರವು ಸಿಗಬೇಕೆಂದು ಪರಿಶ್ರಮಿಸಿ, ತಮ್ಮ ಬದುಕೇ ಮಾದರಿಯೆಂಬಂತೆ ಸರಳವಾಗಿ ಬದುಕಿದ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನಮಗೆಲ್ಲರಿಗೂ ಪ್ರೇರಣಾದಾಯಕ ಮಹಾನ್ ಪುರುಷರು ಎಂದು ತಿಳಿಸಿದರು.
ಸರಳತೆ ಮತ್ತು ಸಮಾಜಮುಖಿ ಬದುಕು ನಮ್ಮದಾಗಬೇಕು. ಮಹಾನ್ ವ್ಯಾಕ್ತಿಗಳ ಬದುಕು ಮತ್ತು ಬರಹ ನಮ್ಮ ಬದುಕಿಗೆ ದಾರಿದೀಪಗಳು ಎಂದು ಹೇಳಿದರು.
ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ, ವ್ಯಸನಮುಕ್ತ ಬಾಳು ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ನಾವುಗಳು ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತ್ಯುತ್ಸವವನ್ನು ಆಚರಿಸೋಣ. ಗಾಂಧೀಜಿಯವರ ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ವಿದೇಶಿಗರು ನಮ್ಮನ್ನು ಗಾಂಧೀ ನಾಡಿನವರು ಎಂದು ಗುರುತಿಸುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಅಹಿಂಸಾ ಚಳುವಳಿಯಿಂದ ಗಾಂಧೀಜಿ ಅವರು ಮಹಾತ್ಮ ಎಂದು ಕರೆಸಿಕೊಂಡರು. ಅವರ ಅಹಿಂಸಾ ತತ್ವದಿಂದ ಪ್ರಭಾವಿತಗೊಂಡ ವಿಶ್ವ ಸಂಸ್ಥೆಯು ಅಕ್ಟೋಬರ್ 2 ಅನ್ನು ವಿಶ್ವ ಅಹಿಂಸಾ ದಿನ ಎಂದು ಘೋಷಣೆ ಮಾಡಿತು. ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಅವರು ಮಹಿಳೆಯರಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿ ಕೊಟ್ಟರು ಎಂದು ಹೇಳಿದರು.
ವಿವಿಧ ಅಂಗನವಾಡಿ ಮಕ್ಕಳು ಸ್ವಾತಂತ್ರ್ಯ ಯೋಧರ ವೇಷ ಭೂಷಣಗಳನ್ನು ಧರಿಸಿದ್ದರೆ, ಶಾಲಾ ವಿದ್ಯಾರ್ಥಿಗಳು ಚಿತ್ರಕಲೆಯನ್ನು ಪ್ರದರ್ಶಿಸಿದರು.
ನಗರಸಭಾ ಸದಸ್ಯ ಮುನಿರಾಜು, ಸಿಡಿಪಿಒ ನವತಾಜ್, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ದೇವರಾಜ್ ಹಾಜರಿದ್ದರು.