Sidlaghatta : ಶಿಡ್ಲಘಟ್ಟ ನಗರ ಹಾಗೂ ತಾಲ್ಲೂಕಿನಾದ್ಯಂತ ಶಿವರಾತ್ರಿ ಆಚರಣೆ ಅಂಗವಾಗಿ ಎಲ್ಲ ಶಿವಾಲಯಗಳಲ್ಲೂ ಬೆಳಿಗ್ಗೆಯಿಂದಲೇ ರುದ್ರಾಭಿಷೇಕದೊಂದಿಗೆ ಪೂಜೆ ನಡೆಯಿತು. ಭಕ್ತಾದಿಗಳು ಪಂಚಲಿಂಗಗಳಾದ ಅಶೋಕ ರಸ್ತೆಯಲ್ಲಿರುವ ಕೋಟೆ ಸೋಮೇಶ್ವರ ಮತ್ತು ಪೇಟೆ ನಗರೇಶ್ವರ, ಕಾಶಿ ವಿಶ್ವನಾಥೇಶ್ವರ, ಅಗ್ರಹಾರ ಬೀದಿಯ ಜಲಕಂಠೇಶ್ವರ ಮತ್ತು ಏಕಾಂಬರೇಶ್ವರ ದೇವಾಲಯಗಳನ್ನು ದರ್ಶಿಸಿ ಎರಡು ಕಿ.ಮೀ ದೂರವಾದರೂ ನಡೆದುಕೊಂಡೇ ವೀರಾಪುರದ ಗವಿಗಂಗಾಧರೇಶ್ವರ ಮತ್ತು ಬೂದಾಳದ ಮಲೆಮಲ್ಲೇಶ್ವರ ದೇವಾಲಯಗಳನ್ನು ಸಂದರ್ಶಿಸುತ್ತಿದ್ದುದು ವಿಶೇಷವಾಗಿತ್ತು.
ನಗರದ ಅರಳೇಪೇಟೆಯ ಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ವತಿಯಿಂದ ದ್ವಾದಶ ಲಿಂಗಗಳ ದರ್ಶನ ಏರ್ಪಡಿಸಿದ್ದು ನೋಡುಗರ ಕಣ್ಮನ ಸೆಳೆಯಿತು.
ತಾಲ್ಲೂಕಿನ ಮಳ್ಳೂರಿನ ಸಾಯಿಬಾಬಾ ಮಂದಿರದಲ್ಲಿನ ಜಲಕಂಠೇಶ್ವರಸ್ವಾಮಿಗೆ ಕುಂಬಾಭಿಷೇಕ, ರುದ್ರಹೋಮ, ಪಲ್ಲಕ್ಕಿ ಸೇವೆ ಮತ್ತು ಪುಷ್ಪಾಭಿಷೇಕವನ್ನು ವೀಕ್ಷಿಸಲು ಗ್ರಾಮಾಂತರ ಪ್ರದೇಶದಿಂದ ನೂರಾರು ಭಕ್ತರು ಸೇರಿದ್ದರು.
ಚೌಡಸಂದ್ರದ ಸೋಮೇಶ್ವರ ದೇಗುಲದಲ್ಲಿ ಶಿವರಾತ್ರಿಯಂದು ಬೇಳಿಗ್ಗೆ ಸೂರ್ಯಕಿರಣ ಲಿಂಗವನ್ನು ಸ್ಪರ್ಶಿಸುವುದು ವಿಶೇಷ ಆಕರ್ಷಣೆ. ಸುತ್ತಮುತ್ತಲ ಗ್ರಾಮಸ್ಥರು ಇದನ್ನು ತಂಡೋಪತಂಡವಾಗಿ ಆಗಮಿಸಿ ದರ್ಶನ ಪಡೆದರು.