Sidlaghatta : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆ (Pre Monsoon Rain) ಹಾಗೂ ಗಾಳಿಯ ಆರ್ಭಟದಿಂದ ರೈತರು ಕಂಗಲಾಗಿದ್ದು, ರೈತರು ಬೆಳೆದಿರುವ ಬೆಳೆಗಳು ಹಾನಿಯಾಗಿ ನಷ್ಟ (Crop Loss) ಉಂಟಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಮುಖ್ಯಮಂತ್ರಿಯೊಂದಿಗೆ ಮಾತನಾಡುವುದಾಗಿ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಾರ್ವಜನಿಕ ಉದ್ದಿಮೆಗಳ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ (M T B Nagaraj) ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮದ ರೈತರೊಬ್ಬರ ಕ್ಯಾಪ್ಸಿಕಂ ಬೆಳೆ ಹಾನಿಗೊಳಗಾಗಿದ್ದ ತೋಟಕ್ಕೆ ಬೇಟಿ ನೀಡಿ ಅವರು ಬೆಳೆ ಹಾನಿ ವೀಕ್ಷಣೆ ಮಾಡಿದರು. ಬೆಳೆ ಹಾನಿಯಾಗಿರುವ ರೈತರಿಗೆ ವೈಯಕ್ತಿಕವಾಗಿ 50 ಸಾವಿರ ರೂ ಹಣವನ್ನು ಸ್ಥಳದಲ್ಲೆ ಪರಿಹಾರ ರೂಪದಲ್ಲಿ ನೀಡಿದರು. ದೇವರು ಕೊಟ್ಟಿರುವ ಪ್ರಕೃತಿಯನ್ನ ಮನುಷ್ಯನ ಸ್ವಾರ್ಥದಿಂದ ಕೆರೆಗಳು ಮುಚ್ಚುವುದು, ಮರಗಳನ್ನ ಕಡಿಯುವುದರಿಂದ ಪ್ರಕೃತಿ ವಿಕೋಪವಾಗುತ್ತದೆ. ಅದರ ಪರಿಣಾಮ ಮನುಷ್ಯನ ಮೇಲೆ ಬೀರುತ್ತದೆ ಎಂದರು.
ರಸಗೊಬ್ಬರ ಅಂಗಡಿಗಳಲ್ಲಿ ರೈತರಿಗೆ ಡಿಎಪಿ ಸರಿಯಾದ ರೀತಿಯಲ್ಲಿ ಮಾರಾಟ ಮಾಡುತ್ತಿಲ್ಲ. ಒಂದು ಮೂಟೆ ಗೊಬ್ಬರದ ಜೊತೆಗೆ ಇತರೆ ಗೊಬ್ಬರವನ್ನು ಕೊಳ್ಳಬೇಕಿದೆ. ಬೇಕಾದವರಿಗೆ ರಾತ್ರಿ ವೇಳೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆಂದು ರೈತರು ಸಚಿವರ ಗಮನಕ್ಕೆ ತಂದರು.
ಅಂತಹ ಅಂಗಡಿಗಳಿಗೆ ಕೂಡಲೇ ನೊಟೀಸ್ ಜಾರಿ ಮಾಡಿ ಲೈಸೆನ್ಸ್ ರದ್ದುಗೊಳಿಸಿ ಬೀಗ ಹಾಕುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಅನುರೂಪ ಅವರಿಗೆ ಸಚಿವರು ಸ್ಥಳದಲ್ಲೆ ಸೂಚಿಸಿದರು. ರಸಗೊಬ್ಬರ ಮಾರಾಟ ಮಳಿಗೆಗಳು ಸ್ಟಾಕ್ ಲೀಸ್ಟ್, ದರದ ವಿವರ, ನಾಮಫಲಕ ಹಾಕುವಂತೆ ಕ್ರಮವಹಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತ , ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್, ಸರ್ಕಾರದ ನಾಮ ನಿದೇರ್ಶಕರಾದ ಕಂಬದ ಹಳ್ಳಿ ಸುರೇಂದ್ರ ಗೌಡ, ನಾಗೇಶ್ ಗೌಡ , ನಗರದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಮಾಜಿ ಶಾಸಕ ಎಂ ರಾಜಣ್ಣ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ರೈತರ ಮನವಿ
ಮುಂಗಾರು ಪೂರ್ವ ಮಳೆಯಿಂದ ರೈತರ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ನೆಲ ಕಚ್ಚಿದ್ದು, ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಪ್ರಾಕೃತಿಕ ವಿಕೋಪ ಎಪ್ಪತ್ತು ಪರಿಹಾರ ಅಡಿಯಲ್ಲಿ ಪ್ರತಿ ಎಕರೆಗೆ 50,000 ಸಾವಿರ ಪರಿಹಾರ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ ಅವರಿಗೆ ರೈತ ಸಂಘದ ಸದಸ್ಯರು ಮನವಿ ಸಲ್ಲಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಮಳೆಯಿಂದ ರೈತರ ಬೆಳೆಗಳಾದ ದ್ರಾಕ್ಷಿ, ಟೊಮೆಟೊ ಮುಂತಾದ ತೋಟಗಾರಿಕಾ ಬೆಳೆಗಳು ವಿಪರೀತ ಮಳೆ ಮತ್ತು ಗಾಳಿಯಿಂದ ಬೆಳೆಗಳು ನೆಲಕಚ್ಚಿ ಅಪಾರ ನಷ್ಟ ಉಂಟಾಗಿರುತ್ತದೆ. ಬೆಳೆಗಳಿಗೆ ಮಾಡಿದ ಸಾಲ ತೀರಿಸಲಾಗದೆ ಅನೇಕ ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದು ತಾವುಗಳು ಪ್ರತಿ ಎಕರೆಗೆ 50,000 ರೂ ಪರಿಹಾರ ಘೋಷಣೆ ಮಾಡಬೇಕು. ಮತ್ತು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳು ಬೆಳೆ ಸಾಲಗಳು ಮರು ಪಾವತಿಗೆ ಒತ್ತಾಯ ಮಾಡದಂತೆ ಬ್ಯಾಂಕುಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.
ದರಖಾಸ್ತು ಕಮೀಟಿಯ ಸಭೆ
ಕ್ಷೇತ್ರದ ಶಾಸಕ ವಿ ಮುನಿಯಪ್ಪ ರವರು ದರಖಾಸ್ತು ಕಮೀಟಿಯ ಸಭೆ ಮಾಡಲು ಬರುತ್ತಿಲ್ಲವೆಂದು ರೈತರು ಸಚಿವರ ಬಳಿ ತಿಳಿಸಿದಾಗ, ತಕ್ಷಣವೇ ತಹಶೀಲ್ದಾರ್ ಅವರಿಗೆ ಕರೆ ಮಾಡಿ, ಶಾಸಕರೊಂದಿಗೆ ಮಾತನಾಡುವೆ, ಕಮೀಟಿಯ ಕಾರ್ಯದರ್ಶಿಗಳಾದ ನೀವು ಮತ್ತು ಸದಸ್ಯರು ಸೇರಿ ದರಖಾಸ್ತು ಕಮೀಟಿಯ ಸಭೆ ಮಾಡಿ ನಮೂನೆ 53 ರ ಅರ್ಜಿಗಳು ವಿಲೆವಾರಿ ಮಾಡಿ ಎಂದು ಸೂಚಿಸಿದರು.