ನಗರದ ವಿಜಯಲಕ್ಷ್ಮಿ ವೃತ್ತದಲ್ಲಿರುವ ಎಚ್.ಕೆ.ಜಿ.ಎನ್ ಶಾದಿ ಮಹಲ್‌ನಲ್ಲಿ ಭಾನುವಾರ ತಮ್ಮ ಅಭಿಮಾನಿಗಳಿಂದ ಏರ್ಪಡಿಸಲಾಗಿದ್ದ ಓತಣಕೂಟದಲ್ಲಿ ಭಾಗವಹಿಸಿ ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿದರು.
ಕ್ಷೇತ್ರದ ಸಮಸ್ತ ಜನತೆಯ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಎಲ್ಲರಿಗೂ ತನ್ನ ಕೈಯಲ್ಲಾಗುವ ಸಹಾಯ ಮಾಡಲು ಸದಾ ಸಿದ್ದನಾಗಿದ್ದೇನೆ ಎಂದು ಅವರು ಹೇಳಿದರು.
2013 ರ ವಿದಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕನಾಗಿ ಐದು ವರ್ಷ ಜನಪರ ಕಾರ್ಯಗಳನ್ನು ಮಾಡಿದ ತೃಪ್ತಿಯಿದೆ. ಆದರೆ 2018 ರ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠರು ನನ್ನ ವಿಚಾರದಲ್ಲಿ ತೆಗೆದುಕೊಂಡ ಕೆಲ ನಿರ್ಧಾರಗಳಿಂದ ಬಿ ಫಾರಂ ವಂಚಿತನಾಗಿ ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಫರ್ಧಿಸಿ ಸೋಲಬೇಕಾಯಿತು. ನಂತರದ 14 ತಿಂಗಳ ಕಾಲ ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿಯರು ಮುಖ್ಯಮಂತ್ರಿಗಳಾಗಿದ್ದಾಗ ನಮಗೆ ಆಹ್ವಾನ ಬರಬಹುದು ಎಂಬ ನಿರೀಕ್ಷೆಯಿತ್ತಾದರೂ ಯಾವುದೇ ಆಹ್ವಾನ ಬರಲಿಲ್ಲ. ಹಾಗಾಗಿ ನನ್ನ ಜೀವವಿರುವವರೆಗೂ ಜೆಡಿಎಸ್ ಪಕ್ಷ ಸೇರುವುದಿಲ್ಲ ಎಂದರು.
ಈಗಾಗಲೇ ಸಾಕಷ್ಟು ಬಿಜೆಪಿ ಪಕ್ಷದ ಕಾರ್ಯಕ್ರಮಗಳಲ್ಲಿ ತಾವು ಭಾಗಿಯಾಗುತ್ತಿದ್ದು ಸಚಿವರು, ಸಂಸದರೊಂದಿಗೆ ಕಾಣಿಸುತ್ತಿದ್ದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ತೀರ್ಮಾನಿಸಲಾಗಿದೇಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕ್ಷೇತ್ರದ ಜನತೆಯ ಭವಿಷ್ಯದ ಜೊತೆಗೆ ಸಮಸ್ಯೆಗಳ ಪರಿಹರಿಸುವ ದೃಷ್ಠಿಯಿಂದ ಸಚಿವರು ಹಾಗೂ ಬೇರೆ ಪಕ್ಷಗಳ ಶಾಸಕರೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ತಮ್ಮ ಅಭಿಮಾನಿಗಳು ಸೇರಿದಂತೆ ಮುಖಂಡರೊಂದಿಗೆ ಚರ್ಚಿಸಿ ಬೇರೆ ಪಕ್ಷ ಸೇರುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
ಕಳೆದ 2018 ರ ವಿಧಾನಸಭೆ ಚುನಾವಣೆ ನಡೆದು ಎರಡೂವರೆ ವರ್ಷದ ನಂತರ ಇದೀಗ ಮಾಜಿ ಶಾಸಕ ಎಸ್.ಮುನಿಶಾಮಪ್ಪ ಹಾಗೂ ತಮ್ಮ ಬೆಂಬಲಿಗರ ಒತ್ತಾಯದ ಮೇರೆಗೆ ಕ್ಷೇತ್ರದಾದ್ಯಂತ ಸಂಚರಿಸಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದು, ದೀಪಾವಳಿಯ ನಂತರ ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎನ್ನುವುದನ್ನು ಬಹಿರಂಗಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ದೊಣ್ಣಹಳ್ಳಿ ರಾಮಣ್ಣ, ರಹಮತ್ತುಲ್ಲಾ, ಕೆ.ಎಸ್.ಕನಕಪ್ರಸಾದ್, ಮುರಳಿ, ಆದಿಲ್, ಸಲಾಂ, ಮಕ್ತಿಯಾರ್ ಹಾಜರಿದ್ದರು.