Home News Cooking Gas ಬೆಲೆ ಏರಿಕೆ : ಮತ್ತೆ ಸೌದೆ ಒಲೆಯತ್ತ ಮುಖ ಮಾಡಿದ ಮಹಿಳೆಯರು!

Cooking Gas ಬೆಲೆ ಏರಿಕೆ : ಮತ್ತೆ ಸೌದೆ ಒಲೆಯತ್ತ ಮುಖ ಮಾಡಿದ ಮಹಿಳೆಯರು!

0

Sidlaghatta : ಅಡುಗೆ ಅನಿಲದ (LPG Cooking Gas) ಬೆಲೆ ಹೆಚ್ಚಳವು (Price Hike) ತಾಲ್ಲೂಕಿನ ಗ್ರಾಮೀಣ ಭಾಗದ ಅಡುಗೆ ಮನೆಯ ಮೇಲೆಯೂ ಬಿದ್ದಿದ್ದು, ಹಲವಾರು ಹೆಣ್ಣುಮಕ್ಕಳು ತಮ್ಮ ಮನೆಗಳಲ್ಲಿ ಸೌದೆ ಒಲೆಯನ್ನು ಬಳಸಲು ಪ್ರಾರಂಭಿಸಿದ್ದಾರೆ.

ಹೊಗೆ ರಹಿತ ಅಡುಗೆ ಮನೆಯ ಕನಸು ಬಿತ್ತಿತ್ತು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲಾ ಯೋಜನೆ. ಆದರೆ ಸಫಲತೆ ಸಾಧಿಸಬೇಕಾದ ಉಜ್ವಲಾ ಯೋಜನೆ ವಿಫಲತೆಯತ್ತ ಹೆಜ್ಜೆ ಹಾಕುತ್ತಿದೆ. ಬಡವರ ಮನೆಗಳಿಗೆ ಮೊದಲ ಬಾರಿಗೆ ಉಚಿತ ಗ್ಯಾಸ್‌ ಸಿಲಿಂಡರ್‌ ಪೂರೈಸುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಉಜ್ವಲಾ, ಅಡುಗೆ ಅನಿಲ ಬೆಲೆ ಏರಿಕೆಯಿಂದ ವಿಫಲತೆಯತ್ತ ಸಾಗಿದೆ. ಶಿಡ್ಲಘಟ್ಟ ತಾಲ್ಲೂಕಿನ ಸುತ್ತಲ ಹಳ್ಳಿಗಳ ಗೃಹಿಣಿಯರು ಮತ್ತು ಪುರುಷರು ಈಗ ಬೆಳಗಾಗುತ್ತಲೇ ಉರುವಲು ಸೌದೆಯ ಹೊರೆ ತರುವ ಕೆಲಸದಲ್ಲಿ ಮಗ್ನರಾಗಿದ್ದಾರೆ.

ಕೇಂದ್ರದ ಈ ಯೋಜನೆ ಬರುವ ಮೊದಲು ಪಡಿತರ ವ್ಯವಸ್ಥೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸುತ್ತಿದ್ದ ಸೀಮೆಎಣ್ಣೆಯಿಂದ ಸ್ಟವ್‌ಗಳನ್ನು ಬಳಸಿ ಅಡುಗೆ ಮಾಡುತ್ತಿದ್ದ ಗೃಹಿಣಿಯರು, ಸರ್ಕಾರ ನೀಡಿದ ಉಚಿತ ಗ್ಯಾಸ್‌ ಸಿಲಿಂಡರ್‌ನ ಸದುಪಯೋಗ ಪಡೆದುಕೊಂಡಿದ್ದರು. ಈ ಯೋಜನೆ ಜಾರಿಯಾಗುತ್ತಲೇ ಇತ್ತಕಡೆ ಸರ್ಕಾರ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡುತ್ತಿದ್ದ ಸೀಮೆಎಣ್ಣೆ ಸರಬರಾಜನ್ನು ನಿಲ್ಲಿಸಿತು.

ಗ್ಯಾಸ್‌ ಬಂದ ನಂತರ ಸ್ಟವ್‌ಗಳ ಉಪಯೋಗ ಕಡಿಮೆಯಾಗಿ ಅವುಗಳನ್ನು ಗೃಹಿಣಿಯರು ಗುಜರಿಗಳಿಗೆ ಹಾಕಿದ್ದರು. ಪ್ರಸ್ತುತ ಅಡುಗೆ ಅನಿಲದ ಬೆಲೆ ಹೆಚ್ಚುತ್ತಲೇ ಸಾಗುತ್ತಿರುವುದರಿಂದ ಮಧ್ಯಮ ಮತ್ತು ಬಡ ವರ್ಗದ ಮಹಿಳೆಯರು ಪ್ರತಿನಿತ್ಯ ಅಡುಗೆ ತಯಾರಿಸಲು ಕಟ್ಟಿಗೆ, ಸಗಣಿಯ ಭರಣಿ (ಕುಳ್ಳು), ಮೆಕ್ಕೆಜೋಳದ ಬೆಂಡು, ಕಟ್ಟಿಗೆಗೆ ಮೊರೆ ಹೋಗಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಯೋಜನೆ ಆರಂಭದಲ್ಲಿ 500 ರೂ. ಇದ್ದ ಒಂದು ಅಡುಗೆ ಸಿಲಿಂಡರ್‌ ದರ, ಈಗ ಸಾವಿರದ ಗಡಿ ಮುಟ್ಟಿದೆ. ಗ್ಯಾಸ್‌ ವಿತರಕರೊಬ್ಬರ ಪ್ರಕಾರ ತಾಲೂಕಿನಲ್ಲಿ ಶೇ 30 ರಷ್ಟು ಫಲಾನುಭವಿಗಳು ಖಾಲಿಯಾದ ನಂತರ ಮತ್ತೆ ಗ್ಯಾಸ್‌ ಸಿಲಿಂಡರ್ ಕೊಳ್ಳದಿರುವುದು ಕಂಡುಬಂದಿದೆ.

ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಗ್ಯಾಸ್ ಸಿಲಿಂಡರ್‌ಗಳ ಮೇಲೆ ರೂ 200 ಸಬ್ಸಿಡಿಯನ್ನು ಸಹ ಘೋಷಿಸಿದೆ. ಈ ಸಬ್ಸಿಡಿಯನ್ನು ವಾರ್ಷಿಕವಾಗಿ 12 ಸಿಲಿಂಡರ್‌ಗಳಿಗೆ ಮಾತ್ರ ಎಂಬ ನಿಬಂಧನೆ ಸಹ ವಿಧಿಸಿದೆ. ಆದರೂ, ಬೆಲೆ ಏರಿಕೆಯ ಬಿಸಿ ತಟ್ಟಿರುವ ಜನತೆ ಸೌದೆಯ ಒಲೆಯ ಕಡೆಗೆ ಮುಖ ಮಾಡಿರುವರು. ಗ್ರಾಮದ ಹೊರವಲಯಗಳಲ್ಲಿ ಬೆಳೆಯುವ ಒಣಗಿರುವ ಕಟ್ಟಿಗೆಗಳನ್ನು ಕಡಿದು ಮನೆಗೆ ಹೊತ್ತು ತರುವ ದೃಶ್ಯ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಪ್ರತಿದಿನ ಕಂಡುಬರುತ್ತಿದೆ.

“ಏರಿದ ಗ್ಯಾಸ್ ಬೆಲೆ, ದಿನಸಿ ಬೆಲೆ ಕೂಡ ಜಾಸ್ತಿಯಾಗಿದೆ. ಎಣ್ಣೆ ಬೆಲೆ ಕೂಡ ಹೆಚ್ಚಾಗಿದೆ. ನಾವು ವ್ಯವಸಾಯ ಮಾಡುವವರು. ಈಗಿನ ಬೆಲೆಯಲ್ಲಿ ಹೇಗೆ ಸಂಸಾರ ಸಾಗಿಸುವುದು. ಅಡುಗೆಯ ಪದಾರ್ಥಗಳೆಲ್ಲದರ ಬೆಲೆ ಏರಿಕೆ ಆಗಿರುವುದರಿಂದ ಉಳಿತಾಯವಿರಲಿ, ಖರ್ಚಿಗೇ ಹಣ ಹೊಂದಿಸುವುದು ಕಷ್ಟಕರವಾಗಿದೆ. ಅದಕ್ಕಾಗಿ ಸೌದೆ ಒಲೆ ಬಳಸಲು ಪ್ರಾರಂಭಿಸಿದ್ದೇವೆ” ಎನ್ನುತ್ತಾರೆ ಅಪ್ಪೇಗೌಡನಹಳ್ಳಿಯ ಭಾಗ್ಯಮ್ಮ.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version