Sidlaghatta :
ಮುಂಬರುವ ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನು ಗೆಲ್ಲಿಸುವ ಮೂಲಕ ಮತ್ತೆ ನರೇಂದ್ರ ಮೋದಿ ಅವರನ್ನೆ ಈ ದೇಶದ ಪ್ರಧಾನಿಯನ್ನಾಗಿ ಮಾಡಬೇಕಿದೆ. ಅದಕ್ಕೆ ನಾವೆಲ್ಲರೂ ಈಗಿನಿಂದಲೆ ಶ್ರಮಿಸಬೇಕಿದೆ ಎಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ಸೀಕಲ್‌ನ ತಮ್ಮ ನಿವಾಸದಲ್ಲಿ ನಡೆದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿವಾರು ಹಾಗೂ ನಗರದ ವಾರ್ಡುವಾರು ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮೋದಿ ಅವರು ತಮ್ಮ ಜನಪರ ಕಾರ್ಯಕ್ರಮಗಳಿಂದ, ಗಟ್ಟಿಯಾದ ಹಾಗೂ ಬಿಗಿಯಾದ ಆಡಳಿತ, ನಾಯಕತ್ವದಿಂದಾಗಿ ವಿಶ್ವ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಅವರ ವರ್ಚಸ್ಸು ದಿನ ದಿನಕ್ಕೂ ಹೆಚ್ಚುತ್ತಿದ್ದು ಭಾರತವೂ ಕೂಡ ಅವರ ನಾಯಕತ್ವದಲ್ಲಿ ವೇಗವಾಗಿ ಅಭಿವೃದ್ದಿ ಹೊಂದಿ ವಿಶ್ವದ ಮುಂಚೂಣಿ ಸ್ಥಾನಕ್ಕೆ ಲಗ್ಗೆಯಿಡುತ್ತಿದೆ ಎಂದರು. ಮೋದಿ ಅವರ ಈ ವರ್ಚಸ್ಸನ್ನು ನಾವು ಸದುಪಯೋಗಪಡಿಸಿಕೊಂಡು ಮುಂದಿನ ಸಂಸತ್ ಚುನಾವಣೆಯನ್ನು ಎದುರಿಸಬೇಕಿದೆ. ಮತ್ತೊಮ್ಮೆ ಮೋದಿ ಎಂಬ ಘೋಷಣೆಯೊಂದಿಗೆ ಪ್ರತಿ ಮತದಾರನ ಮನ ಗೆಲ್ಲಬೇಕಿದೆ ಎಂದು ಹೇಳಿದರು.
ಸಂಸತ್ ಚುನಾವಣೆಯನ್ನು ಎದುರಿಸಲು ತಂತ್ರಗಾರಿಕೆ ಮುಖ್ಯ, ಮೋದಿ ಅವರ ಯಶಸ್ವಿ ಆಡಳಿತ, ಜನಪರ ಯೋಜನೆಗಳನ್ನು ಮತದಾರರ ಮನ ಮುಟ್ಟುವಂತೆ ಅವರಿಗೆ ಮನವರಿಕೆ ಮಾಡಿಕೊಡಬೇಕು. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ನಮ್ಮ ಪಕ್ಷದ ಕೇಂದ್ರದ ಮುಖಂಡರು ಕಾಲ ಕಾಲಕ್ಕೆ ಕಳುಹಿಸುವ ನೀತಿ ನಿಯಮ, ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಪಕ್ಷದಲ್ಲಿ ಶಿಸ್ತು ಮುಖ್ಯವಾಗಿದ್ದು ಪಕ್ಷದ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಗೆಲವು ನಮ್ಮದೆ, ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ ಎಂದರು.
ಇನ್ನು ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷವು ಮೈತ್ರಿ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಹಾಗೂ ಪಕ್ಷದ ಮುಖಂಡರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಕ್ಷ ಸಂಘಟನೆ, ಅಕಾರ ಹಿಡಿಯುವ ಬಗ್ಗೆ ಕಾಲ ಕಾಲಕ್ಕೆ ಹಿರಿಯ ನಾಯಕರಿಂದ ಬರುವ ಸಲಹೆ ಸೂಚನೆಗಳನ್ನು ನಾವು ಪಾಲಿಸಬೇಕಿದೆ, ಆ ಮೂಲಕ ಮೈತ್ರಿಯನ್ನು ಕಾಪಾಡಿಕೊಂಡು ಹೋಗುವ ಅನಿವಾರ್ಯವೂ ನಮ್ಮ ಮೇಲಿದೆ ಎಂದು ತಿಳಿಸಿದರು.
ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸುವುದು ಹೇಗೆ, ಮೈತ್ರಿಯ ಹೊಂದಾಣಿಕೆಯಲ್ಲಿ ನಮ್ಮೆಲ್ಲರ ಪಾತ್ರ ಏನು, ಮೋದಿಯವರಿಗೆ ಇರುವ ವರ್ಚಸ್ಸನ್ನು ಬಳಸಿಕೊಳ್ಳುವುದು ಹೇಗೆಂಬ ಬಗ್ಗೆ ಸಭೆಯಲ್ಲಿ ಆಂತರಿಕವಾಗಿ ಚರ್ಚಿಸಲಾಯಿತು.
ಮಾಜಿ ಶಾಸಕ ಎಂ.ರಾಜಣ್ಣ, ವಿಭಾಗೀಯ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸೀಕಲ್ ಆನಂದಗೌಡ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ಮತ್ತಿತರರು ವೇದಿಕೆಯಲ್ಲಿದ್ದರು.